ಕಾರವಾರ: ಹದಗೆಟ್ಟ ರಸ್ತೆ ದುರಸ್ತಿಗೊಳಿಸಲು ನಿರ್ಲಕ್ಷ್ಯವಹಿಸಿದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಗ್ರಾಮಸ್ಥರು ರಸ್ತೆ ಹೊಂಡಗಳಲ್ಲಿ ಬಾಳೆಗಿಡ ನೆಟ್ಟು ಬೃಹತ್ ಪ್ರತಿಭಟನೆ ನಡೆಸಿದ ಘಟನೆ ಹೊನ್ನಾವರ ತಾಲೂಕಿನ ಹೊದ್ಕೆಯ ಮಾರುಗೇರಿಯಲ್ಲಿ ನಡೆದಿದೆ.
ಹೊನ್ನಾವರ ತಾಲೂಕಿನ ಚಂದಾವರದಿಂದ ಹೊದ್ಕೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟು ಹಲವು ವರ್ಷಗಳೇ ಕಳೆದಿದೆ. ಇದರಿಂದ ಸಾರ್ವಜನಿಕರಿಗೆ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿ ಇದೆ. ಹಲವು ಬಾರಿ ರಸ್ತೆ ದುರಸ್ತಿಗೊಳಿಸುವಂತೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸ್ಥಳೀಯರು ರಸ್ತೆಯಲ್ಲಿ ಬಾಳೆ ಗಿಡಗಳನ್ನು ನೆಡುವುದರ ಮೂಲಕ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ರಸ್ತೆಗೆ ಡಾಂಬರೀಕರಣ ಮಾಡಬೇಕು ಎನ್ನುವ ಉದ್ದೇಶದಿಂದ ರಸ್ತೆಗೆ ಜಲ್ಲಿ ಹಾಕಲಾಗಿತ್ತು. ಜಲ್ಲಿ ಹಾಕಿ ನಾಲ್ಕೈದು ವರ್ಷ ಕಳೆದರೂ ಇದುವರೆಗೆ ರಸ್ತೆ ಡಾಂಬರು ಭಾಗ್ಯ ಕಂಡಿಲ್ಲ. ರಸ್ತೆ ದುರಸ್ತಿ ಮಾಡುವಂತೆ ಗ್ರಾಮಸ್ಥರು ಹತ್ತಾರು ಬಾರಿ ಶಾಸಕರ ಮನೆಗೆ ಬಾಗಿಲಿಗೆ ಹೋಗಿ ಮನವಿ ಸಲ್ಲಿಸಿದ್ದಾರೆ. ಆದರೆ, ಶಾಸಕರು ಮಾತ್ರ ಇನ್ನೂ ಈ ರಸ್ತೆಗೆ ಡಾಂಬರ ಹಾಕಿಸುವುದಕ್ಕೆ ಮನಸ್ಸು ಮಾಡಿಲ್ಲ.
ಹೀಗಾಗಿ ಇದೀಗ ಗ್ರಾಮಸ್ಥರು ರಸ್ತೆಯಲ್ಲಿ ಬಾಳೆ ಗಿಡಗಳನ್ನು ನೆಟ್ಟು ಪ್ರತಿಭಟನೆ ಮಾಡಿದ್ದು, ಆದಷ್ಟು ಶೀಘ್ರದಲ್ಲಿ ರಸ್ತೆ ದುರಸ್ತಿ ಮಾಡದೆ ಹೋದರೆ ಶಾಸಕ ವಿರುದ್ಧ ಉಗ್ರವಾಗಿರುವ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ರಸ್ತೆ ಕಾಮಗಾರಿ ಮಾಡಿದ ಮೂರು ದಿನದಲ್ಲೇ ಕಿತ್ತು ಬರುತ್ತಿದೆ ಡಾಂಬರು.. ಜನರ ಆತಂಕ