ಕಾರವಾರ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಮೂರ್ನಾಲ್ಕು ತಿಂಗಳುಗಳು ಬಾಕಿ ಇರುವಂತೆಯೇ ರಾಜಕೀಯ ಚಟುವಟಿಕೆಗಳು ರಂಗೇರಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆಯ ಅಸ್ತ್ರ ಎಂಬಂತೆ ಪ್ರತ್ಯೇಕ ಜಿಲ್ಲೆ ಎನ್ನುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಇದಕ್ಕೆ ಪೂರಕವಾಗಿ ಸ್ಪೀಕರ್ ಕಾಗೇರಿಯವರ ಹೇಳಿಕೆ ಜಿಲ್ಲೆಯಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಗೆ ಕಾರಣವಾಗಿದೆ.
ಶಿರಸಿ ಪ್ರತ್ಯೇಕ ಜಿಲ್ಲೆ ಕೂಗು : ರಾಜ್ಯ ವಿಧಾನಸಭಾ ಚುನಾವಣೆ ಬಹುತೇಕ ಏಪ್ರಿಲ್ ವೇಳೆಯಲ್ಲಿ ನಡೆಯಲಿದೆ. ರಾಜಕೀಯ ಪಕ್ಷಗಳು ಒಂದೆಡೆ ಈ ಬಾರಿ ಅಧಿಕಾರಕ್ಕೆ ಬರಲೇಬೇಕು ಎಂದು ಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದೆಡೆ ಕ್ಷೇತ್ರದ ಅಭ್ಯರ್ಥಿಗಳು ಗೆಲುವಿಗಾಗಿ ಜನರ ಮುಂದೆ ನಾನಾ ಕಸರತ್ತು ನಡೆಸುತ್ತಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಕೆಲ ರಾಜಕಾರಣಿಗಳು ಪ್ರತ್ಯೇಕ ಜಿಲ್ಲೆಯ ಅಸ್ತ್ರವನ್ನು ಚುನಾವಣೆಯಲ್ಲಿ ಬಳಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಚುನಾವಣಾ ಅಸ್ತ್ರವಾಗಿ ಬಳಕೆ : ಶಿರಸಿ ಕ್ಷೇತ್ರದ ಶಾಸಕ, ವಿಧಾನಸಭಾ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿರಸಿಯ ಕಾರ್ಯಕ್ರಮವೊಂದರಲ್ಲಿ ಪ್ರತ್ಯೇಕ ಜಿಲ್ಲೆಯ ಧ್ವನಿ ಎತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ದೊಡ್ಡದಿದೆ. ಆದ್ದರಿಂದ ಪ್ರತ್ಯೇಕ ಜಿಲ್ಲೆ ಅಗತ್ಯವಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಆದರೆ, ಈ ಹೇಳಿಕೆಗೆ ವಿರೋಧವೂ ವ್ಯಕ್ತವಾಗಿದ್ದು ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳನ್ನು ಮುಚ್ಚಿ ಹಾಕಲು ಜಿಲ್ಲೆ ವಿಭಜನೆ ಎನ್ನುವ ಅಸ್ತ್ರವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಜಿಲ್ಲೆಯ ವಿಭಜನೆಗೆ ಕೆಲವರ ವಿರೋಧ: ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಘಟ್ಟದ ಮೇಲಿನ ಹಾಗೂ ಘಟ್ಟದ ಕೆಲಗಿನ ಭಾಗ ಸೇರಿ ಒಟ್ಟು ಹನ್ನೆರಡು ತಾಲೂಕುಗಳಿದ್ದು, ಘಟ್ಟದ ಮೇಲಿನ ತಾಲೂಕುಗಳನ್ನು ಒಂದು ಜಿಲ್ಲೆ ಹಾಗೂ ಕರಾವಳಿ ಭಾಗವನ್ನು ಒಂದು ಜಿಲ್ಲೆಯನ್ನ ಮಾಡಬೇಕು ಎನ್ನುವುದು ಕೆಲವರ ಬೇಡಿಕೆ. ಆದರೆ ಜನಸಂಖ್ಯೆಯೇ ಅಧಿಕ ಇಲ್ಲದ ಜಿಲ್ಲೆಯನ್ನು ವಿಭಜನೆ ಮಾಡಿ ಏನು ಪ್ರಯೋಜನ. ಜಿಲ್ಲೆ ವಿಭಜನೆ ಮಾಡಿ ಸಣ್ಣದಾಗಿ ಮಾಡಿದರ ಅಭಿವೃದ್ದಿ ಆಗಲಿದೆ ಎನ್ನುವುದು ತಪ್ಪು ಕಲ್ಪನೆ ಎನ್ನುವುದು ಕೆಲವರ ವಿರೋಧ.
ಅದು ಕಾಗೇರಿಯವರ ಸ್ವಂತ ಅಭಿಪ್ರಾಯ: ಜಿಲ್ಲೆಯ ವಿಭಜನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರ ಬಳಿ ಕೇಳಿದರೆ, ಸುಮ್ಮನೇ ಜಿಲ್ಲೆಯನ್ನು ವಿಭಜನೆ ಮಾಡಲು ಸಾಧ್ಯವಿಲ್ಲ. ಅದು ಕಾಗೇರಿಯವರು ಸ್ವಂತ ಅಭಿಪ್ರಾಯ. ಹಾಗೇನಾದರೂ ವಿಭಜನೆ ಮಾಡುವುದಾದರೆ ತಜ್ಞರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪ್ರತ್ಯೇಕ ಶಿರಸಿ ಜಿಲ್ಲೆಯ ಬಗ್ಗೆ ಕೇವಲ ಕಾಗೇರಿಯವರು ಮಾತ್ರ ಧ್ವನಿ ಎತ್ತಿದ್ದಾರೆ. ಆದರೆ, ಘಟ್ಟದ ಮೇಲಿನ ತಾಲೂಕಿನ ಶಾಸಕರಾದ ಮಾಜಿ ಸಚಿವ ಆರ್ ವಿ ದೇಶಪಾಂಡೆಯಾಗಲಿ, ಸಚಿವ ಶಿವರಾಮ್ ಹೆಬ್ಬಾರ್ ಅವರಾಗಲಿ ಈ ಬಗ್ಗೆ ಆಸಕ್ತಿ ತಳೆದಿಲ್ಲ. ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ತಣ್ಣಗಾಗಿದ್ದ ಪ್ರತ್ಯೇಕ ಜಿಲ್ಲೆ ಕೂಗು ಮತ್ತೆ ಕೇಳಿ ಬರುತ್ತಿದ್ದು, ಇದು ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ : ಜಿಲ್ಲೆ ಇಬ್ಭಾಗದ ಕುರಿತು ಚರ್ಚೆ ಆಗಲಿ: ಸಚಿವ ಶಿವರಾಮ್ ಹೆಬ್ಬಾರ್