ಕಾರವಾರ (ಉತ್ತರಕನ್ನಡ): ಅಪಘಾತ ತಡೆಗೆ ನಗರದಲ್ಲಿ ರಸ್ತೆ ವಿಸ್ತರಣೆ ಕಾರ್ಯ ಮಾಡಲಾಗುತ್ತಿದೆ. ಆದರೆ, ಕಾರವಾರ - ಕೈಗಾ - ಯಲ್ಲಾಪುರ ರಸ್ತೆ ಅಗಲೀಕರಣ ಕಾಮಗಾರಿಯಿಂದಾಗಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಇಂದು ಬೆಳಗ್ಗೆ ಇಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಶಾಲೆಗೆ ತೆರಳುತ್ತಿದ್ದ ಶಿಕ್ಷಕರೊಬ್ಬರು ಮೃತಪಟ್ಟಿದ್ದಾರೆ. ಮೃತ ಶಿಕ್ಷಕರನ್ನು ತಾಲೂಕಿನ ಕಿನ್ನರ ಮೂಲದ ಉಮೇಶ್ ಗುನಗಿ(50) ಎಂದು ಗುರುತಿಸಲಾಗಿದೆ.
ಇಂದು ಮುಂಜಾನೆ ನಗರದ ಹಬ್ಬುವಾಡ ರಸ್ತೆಯಲ್ಲಿ ಶಾಲೆಗೆ ತೆರಳುತ್ತಿದ್ದ ಶಿಕ್ಷಕ ಉಮೇಶ್ ಗುನಗಿ(50) ಲಾರಿ ಹರಿದು ದಾರುಣವಾಗಿ ಸಾವನ್ನಪ್ಪಿದ್ದಾರೆ. ಉಮೇಶ ಗುನಗಿ ಬೈಕ್ನಲ್ಲಿ ತೆರಳುವ ಸ್ಕಿಡ್ ಆಗಿ ನೆಲಕ್ಕೆ ಬಿದ್ದಿದ್ದು, ಈ ವೇಳೆ, ಹಿಂದಿನಿಂದ ವೇಗವಾಗಿ ಬಂದ ಲಾರಿ ಅವರ ತಲೆ ಮೇಲೆ ಹರಿದಿದೆ. ಇದರಿಂದ ಉಮೇಶ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಕ್ಷಣ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು. ಮೃತ ಉಮೇಶ್ ಗುನಗಿ ಪ್ರತಿಭಾನ್ವಿತ ಶಿಕ್ಷಕರಾಗಿದ್ದು, ತಾಲೂಕಿನಲ್ಲಿ ಚಿರಪರಿಚಿತ ವ್ಯಕ್ತಿಯಾಗಿದ್ದರು. ನೆಚ್ಚಿನ ಶಿಕ್ಷಕರನ್ನು ಕಳೆದುಕೊಂಡಿರುವುದಕ್ಕೆ ಸ್ಥಳದಲ್ಲಿ ನೆರೆದಿದ್ದವರು ಕಂಬನಿ ಮಿಡಿದರು.
ಕಾರವಾರ - ಕೈಗಾ - ಯಲ್ಲಾಪುರ ರಸ್ತೆ ಕಾಮಗಾರಿ : ಕಾರವಾರದಿಂದ ಕೈಗಾ ಮೂಲಕ ಯಲ್ಲಾಪುರ ಸಂಪರ್ಕ ಮಾಡುವ ರಾಜ್ಯ ಹೆದ್ದಾರಿ ಇದಾಗಿದ್ದು, ನಿತ್ಯ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಕಳೆದ ಕೆಲ ವರ್ಷಗಳಿಂದ ಸಂಪೂರ್ಣವಾಗಿ ಹದಗೆಟ್ಟಿದ್ದ ರಸ್ತೆಯನ್ನು ಎರಡು ವರ್ಷದ ಹಿಂದೆ ಹಬ್ಬುವಾಡದವರೆಗೆ ಲೋಕೊಪಯೋಗಿ ಇಲಾಖೆಯು ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಂಡಿತ್ತು. ಆದರೆ, ಕಳೆದ ಒಂದೂವರೆ ವರ್ಷದಿಂದ ಕಾಮಗಾರಿ ನಡೆಸುತ್ತಿದ್ದರೂ ಈವರೆಗೂ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಂಡಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಅರವಿಂದ ಗುನಗಿ, ರಸ್ತೆ ಮಧ್ಯ ಡಿವೈಡರ್ ಅಳವಡಿಸಲು ತೀರ್ಮಾನಿಸಿ ಕಾಮಗಾರಿ ನಡೆಸಲಾಗಿತ್ತು. ಬಳಿಕ ಅದನ್ನು ಕೈ ಬಿಟ್ಟು ಡಿವೈಡರ್ ಅಳವಡಿಸುವ ಸ್ಥಳದಲ್ಲಿ ಮಣ್ಣು ಕಲ್ಲುಗಳನ್ನು ತುಂಬಲಾಗಿದೆ. ಇದರಿಂದ ನಿತ್ಯ ಅಪಘಾತ ನಡೆಯುತ್ತಿದೆ. ಅಲ್ಲದೇ ರಸ್ತೆ ಪಕ್ಕದ ಚರಂಡಿಗಳಿಗೆ ಸ್ಲ್ಯಾಬ್ ಅಳವಡಿಸುವ ಪಿಚ್ಚಿಂಗ್ ನಿರ್ಮಾಣ ಮಾಡುವ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಈ ರಸ್ತೆ ನಿತ್ಯವೂ ಜನ ಜಂಗುಳಿಯಿಂದಲೇ ತುಂಬಿರುತ್ತದೆ. ಆದರೂ ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಲು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಹೇಳಿದರು.
ನಗರಸಭೆ ಸದಸ್ಯ ಪ್ರೇಮಾನಂದ ಗುನಗಾ ಮಾತನಾಡಿ, 4.5 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಆದರೆ, ಕಳೆದ ಅವಧಿಯಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಗೆ ಇದೀಗ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಡಿವೈಡರ್ ಇದ್ದರೇ ಅಪಘಾತಗಳು ಆಗುತ್ತಿರಲಿಲ್ಲ. ಅಲ್ಲದೆ ಪ್ರತಿ ಮಳೆಗಾಲದ ವೇಳೆ ರಸ್ತೆಯಲ್ಲಿ ಮಳೆ ನೀರಿನಿಂದ ತುಂಬಿಕೊಂಡಿರುತ್ತದೆ. ಇದೀಗ ಚರಂಡಿಗಳನ್ನು ಕೂಡ ಸರಿಯಾಗಿ ಮಾಡಿಲ್ಲ. ಚರಂಡಿಗಳು ಓಪನ್ ಆಗಿಯೇ ಇರುವುದರಿಂದ ಹಲವರು ಬಿದ್ದು ಗಾಯಗೊಂಡ ಘಟನೆ ಕೂಡ ನಡೆದಿದೆ. ಅಲ್ಲದೇ ನಗರಕ್ಕೆ ಸಂಪರ್ಕ ಮಾಡುವ ಮುಖ್ಯ ರಸ್ತೆಯಾದ ಕಾರಣ ಮಕ್ಕಳು ಮಹಿಳೆಯರೂ ಕೂಡ ಇದೇ ರಸ್ತೆ ಮೂಲಕ ಸಂಚರಿಸುತ್ತಾರೆ. ರಸ್ತೆ ವಿಸ್ತರಣೆ ಕಾಮಗಾರಿ ಪ್ರಾರಂಭವಾದ ಬಳಿಕ ಮೂವರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಈ ಬಗ್ಗೆ ಆದಷ್ಟು ಬೇಗ ನಗರಸಭೆ, ಜಿಲ್ಲಾಡಳಿತ ಎಚ್ಚೆತ್ತುಕೊಂಡು ರಸ್ತೆ ಕಾಮಗಾರಿ ನಡೆಸಿ ಅಪಘಾತವನ್ನು ತಡೆಯಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಕೊಪ್ಪಳದಲ್ಲಿ ಬೆಳೆ ಹಾನಿ: ನಷ್ಟ ಪರಿಹಾರ ನೀಡುವಂತೆ ರೈತರ ಒತ್ತಾಯ