ಕಾರವಾರ : ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಆ ಜಾಗದಲ್ಲಿ ಯುದ್ಧ ವಿಮಾನವೊಂದು ವಸ್ತು ಸಂಗ್ರಹಾಲಯವಾಗಿ ಸಿದ್ಧವಾಗಿ ನಿಲ್ಲಬೇಕಿತ್ತು. ಈ ಮೂಲಕ ಪ್ರವಾಸಿಗರ ಅಚ್ಚುಮೆಚ್ಚಿನ ಪ್ರದೇಶಕ್ಕೊಂದು ನೂತನ ಆಕರ್ಷಣೆ ಸೇರ್ಪಡೆಯಾಗುತ್ತಿತ್ತು. ಆದರೆ, ವಸ್ತುಸಂಗ್ರಹಾಲಯದ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದ್ದು, ಇದರಿಂದ ಪ್ರವಾಸಿಗರು ಬೇಸರಪಡುವಂತಾಗಿದೆ.
ಕರಾವಳಿಯ ಹೆಬ್ಬಾಗಿಲು ಉತ್ತರಕನ್ನಡ ಜಿಲ್ಲೆಯ ಕಾರವಾರ ಅಂದಾಕ್ಷಣ ಮೊದಲು ನೆನಪಾಗೋದೇ ಇಲ್ಲಿನ ವಿಶಾಲವಾದ ಕಡಲತೀರ. ಜೊತೆಗೆ ದೇಶದ ಪ್ರತಿಷ್ಟಿತ ಯೋಜನೆಗಳಲ್ಲಿ ಒಂದಾದ ಕದಂಬ ನೌಕಾನೆಲೆ. ತಾಲೂಕಿನ ಅರಗಾ ಗ್ರಾಮದ ಬಳಿ ಇರುವ ಕದಂಬ ನೌಕಾನೆಲೆ ಏಷ್ಯಾದಲ್ಲೇ ಅತಿದೊಡ್ಡ ನೌಕಾ ನೆಲೆಯಾಗಿದೆ.
ಇದು ಇಡೀ ರಾಜ್ಯಕ್ಕೂ ಹೆಮ್ಮೆ ಹೌದು. ಇದರೊಂದಿಗೆ ಪ್ರವಾಸಿಗರನ್ನ ಆಕರ್ಷಿಸುವುದರ ಜೊತೆಗೆ ಕದಂಬ ನೌಕಾನೆಲೆಯ ಬಗ್ಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ರವೀಂದ್ರನಾಥ ಟ್ಯಾಗೋರ್ ತೀರದಲ್ಲಿ ಇಡಲಾಗಿರುವ ಚಾಪೆಲ್ ಯುದ್ಧ ನೌಕೆ ವಸ್ತುಸಂಗ್ರಹಾಲಯ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ. ಇದಕ್ಕೆ ಹೊಸ ಸೇರ್ಪಡೆ ಎನ್ನುವಂತೆ ಇದೇ ಕಡಲತೀರದ ಬಳಿ ಯುದ್ಧವಿಮಾನ ಸಂಗ್ರಹಾಲಯ ಸ್ಥಾಪಿಸಲು ಯೋಜನೆ ಸಿದ್ಧವಾಗಿತ್ತು.
2 ವರ್ಷವಾದರೂ ಸಾಕಾರಗೊಳ್ಳದ ಯೋಜನೆ : 2019ರ ಮಾರ್ಚ್ ತಿಂಗಳಲ್ಲಿ ನಿವೃತ್ತಿ ಹೊಂದಿದ ಟುಪೋಲೆವ್ 142M ಯುದ್ದವಿಮಾನವನ್ನು ಟ್ಯಾಗೋರ್ ಕಡಲತೀರಕ್ಕೆ ತಂದು ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಲು ನೌಕಾನೆಲೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕಳೆದ 2020ರಲ್ಲೇ ಬರಬೇಕಿದ್ದ ಯುದ್ಧವಿಮಾನ ಕೊರೊನಾ ಕಾರಣಕ್ಕೆ ತಡವಾಗಿದ್ದು, ಇದುವರೆಗೂ ಸಹ ಬಂದಿಲ್ಲ. ಇದ್ರಿಂದಾಗಿ ಈಗ ಪ್ರವಾಸಿಗರಿಗೆ ಸದ್ಯ ವಾರ್‌ಶಿಪ್ ಮ್ಯೂಸಿಯಂ ಒಂದೇ ಆಕರ್ಷಣೆಯಾಗಿದೆ. ಈ ನಿಟ್ಟಿನಲ್ಲಿ ಆದಷ್ಟು ಶೀಘ್ರದಲ್ಲಿ ಯುದ್ಧವಿಮಾನ ವಸ್ತುಸಂಗ್ರಹಾಲಯವೂ ಸ್ಥಾಪಿಸಬೇಕಿದೆ ಎಂಬುವುದು ಸ್ಥಳೀಯರ ಒತ್ತಾಸೆ.
ಕಾರವಾರ ಕಡಲತೀರದಲ್ಲಿರುವ ವಾರ್‌ಶಿಪ್ ಮ್ಯೂಸಿಯಂ ರಾಜ್ಯದಲ್ಲೇ ಏಕೈಕ ಯುದ್ಧನೌಕೆ ವಸ್ತುಸಂಗ್ರಹಾಲಯವಾಗಿದೆ. ಚಾಪೆಲ್ ಮ್ಯೂಸಿಯಂಗೆ ಭೇಟಿ ನೀಡುವ ಪ್ರವಾಸಿಗರು ಭಾರತೀಯ ನೌಕಾನೆಲೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಳ್ಳುವುದರ ಜೊತೆಗೆ ಯುದ್ಧನೌಕೆಯನ್ನು ಹತ್ತಿರದಿಂದಲೇ ವೀಕ್ಷಿಸಲು ಅವಕಾಶ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಯುದ್ಧವಿಮಾನ ಸಂಗ್ರಹಾಲಯವೂ ಟ್ಯಾಗೋರ್ ಬೀಚ್‌ಗೆ ಇನ್ನಷ್ಟು ಮೆರುಗು ಸಿಗಲಿದೆ.
ಜಿಲ್ಲಾಡಳಿತ ಹೇಳುವುದೇನು?: ಯುದ್ಧವಿಮಾನದ ಸ್ಥಳಾಂತರದ ಜವಾಬ್ದಾರಿಯನ್ನು ನೌಕಾಪಡೆ ವಹಿಸಿಕೊಂಡಿದ್ದು, ಟೆಂಡರ್ ಪ್ರಕ್ರಿಯೆ ವಿಳಂಬವಾಗಿರುವ ಹಿನ್ನೆಲೆ ವಸ್ತುಸಂಗ್ರಹಾಲಯ ನಿರ್ಮಾಣ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಇದೇ ವರ್ಷದ ಮಾರ್ಚ್ ವೇಳೆಗೆ ಟುಪೋಲೆವ್ ಯುದ್ಧವಿಮಾನವನ್ನು ಕೊಚ್ಚಿಯಿಂದ ಕಾರವಾರಕ್ಕೆ ತರುವ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದ ವಿಳಂಬವಾಗುವಂತಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳುತ್ತಾರೆ.
ಇದನ್ನೂ ಓದಿ: ಕರ್ನಾಟಕದ ಮೂರು ಜಿಲ್ಲೆಗಳ ಕಬ್ಬಿಣದ ಅದಿರು ಸಾಗಿಸಲು ಸುಪ್ರೀಂ ಗ್ರೀನ್ ಸಿಗ್ನಿಲ್