ಕಾರವಾರ: ಶ್ರೀ ರಾಮನ ಶರದಿಂದ ಉದ್ಬವಿಸಿದೆ ಎನ್ನುವ ಪ್ರತೀತಿ ಹೊಂದಿರುವ ಹೊನ್ನಾವರದಲ್ಲಿ ಶರಾವತಿ ನದಿಗೆ ದೀಪ ಬೆಳಗುವ ವಿಶೇಷ ಕಾರ್ಯಕ್ರಮ ನಡೆಯಿತು. ಶಿವಮೊಗ್ಗದ ಅಂಬುತೀರ್ಥದಲ್ಲಿ ಉಗಮಗೊಂಡು ಹೊನ್ನಾವರ ತಾಲೂಕಿನಲ್ಲಿ ಹರಿದು ಸಮುದ್ರ ಸೇರುವ ಶರಾವತಿ ನದಿಗೆ ದೀಪವನ್ನು ಬೆಳಗಿಸಿ ನಮಿಸುವ ಭಾವನಾತ್ಮಕ ಕಾರ್ಯಕ್ರಮಕ್ಕೆ ಕರ್ಕಿಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಸ್ವಾಮೀಜಿ ಚಾಲನೆ ನೀಡಿದರು.
ಆಶೀರ್ವಚನ ನೀಡಿದ ಶ್ರೀಗಳು, ತಾಲೂಕಿನ ಹಲವರಿಗೆ ಜೀವನಾಡಿಯಾದ ಶರಾವತಿಯನ್ನು ಪೂಜಿಸುವ ಕಾರ್ಯವಾಗಬೇಕು. ಮೂರು ಮಾತೆಯರಿದ್ದಾರೆ. ಜನ್ಮ ನೀಡಿದ ತಾಯಿ, ಗೋಮಾತೆ ಮತ್ತು ಜಲ ಮಾತೆ. ನಮ್ಮ ಪ್ರಾಂತ್ಯದಲ್ಲಿ ಹರಿಯುತ್ತಿರುವ ಶರಾವತಿ ನದಿಯ ತ್ಯಾಗದಿಂದ ಇಲ್ಲಿನ ಜನ ಸುಖಮಯ ಜೀವನ ನಡೆಸುತ್ತಿದ್ದಾರೆ. ಈ ನದಿಯ ಸ್ವಚ್ಛತೆಗೆ ನಾವು ಅದ್ಯತೆ ನೀಡಬೇಕು. ನದಿ ನೀರನ್ನು ಹಾಳು ಮಾಡುವ ಕೆಲಸ ಮಾಡಬಾರದು. ವರ್ಷವಿಡೀ ಈ ನದಿಯ ಸ್ವಚ್ಛತೆಗೆ ಶ್ರಮಿಸೋಣ. ಶರಾವತಿ ತಾಯಿ ನಮ್ಮನ್ನೆಲ್ಲ ಹರಸಲಿ ಎಂದರು.
ಶಾಸಕ ಸುನೀಲ ನಾಯ್ಕ ಮಾತನಾಡಿ, ತಾಲೂಕಿನ ಜನತೆಯ ಭವಿಷ್ಯಗಳ ನಾಡಿ ಶರಾವತಿ ನದಿಯಾಗಿದೆ. ಇದು ಇತಿಹಾಸ ಮನೋರಂಜನೆ ವಸ್ತುವಲ್ಲ. ಶಾಶ್ವತವಾಗಿ ನೆನಪಿಡುವ ಕಾರ್ಯಕ್ರಮ ಇದಾಗಲಿದೆ ಎಂದರು. ಶಾಸಕ ದಿನಕರ ಶೆಟ್ಟಿ ಮಾತನಾಡಿ, ಮಲಿನಗೊಂಡ ಶರಾವತಿ ನದಿ ಸ್ವಚ್ಛ ಕಾರ್ಯಕ್ರಮ ಕೈಗೊಂಡಿರುವುದು ಪ್ರಶಂಸನಾರ್ಹ. ಇದು ವರ್ಷವಿಡೀ ನಡೆಯುವ ಕಾರ್ಯಕ್ರಮವಾಗುವ ಮೂಲಕ ಶರಾವತಿ ನದಿಯನ್ನು ಶುದ್ಧವಾಗಿಸೋಣ ಎಂದು ಕರೆ ನೀಡಿದರು.
ಸಾವಿರಾರು ಸಂಖ್ಯೆಯ ನಾಗರಿಕರು, ಮಹಿಳೆಯರು ಶರಾವತಿ ನದಿಯಲ್ಲಿ ದೀಪ ಬೆಳಗಿ ನಮಿಸಿದರು. ಶರಾವತಿ ಎಡಬಲದಂಡೆಯ ವಿವಧೆಡೆ ನೂರಾರು ಸಂಖ್ಯೆಯಲ್ಲಿ ದೀಪನಮನ ನಡೆದಿರುವುದು ವಿಶೇಷವಾಗಿತ್ತು.
ಇದನ್ನೂ ಓದಿ: ದೈವಗಳಿಂದಲೇ ಮುಸ್ಲಿಂ ವ್ಯಾಪಾರಿಗಳ ವ್ಯಾಪಾರಕ್ಕೆ ಚಾಲನೆ : ಗಡಿ ಜಿಲ್ಲೆಯಲ್ಲಿ ಸಾಮರಸ್ಯದ ಉತ್ಸವ!