ಭಟ್ಕಳ: ಮನೆಯ ಕೊಟ್ಟಿಗೆಯಿಂದ ಮೇಯಲು ಹೋದ ಕರುವೊಂದರ ಮೇಲೆ ಹುಲಿಯೊಂದು ಏಕಾಏಕಿ ದಾಳಿ ನಡೆಸಿ ಸಾಯಿಸಿರುವ ಘಟನೆ ಬುಧವಾರ ತಡರಾತ್ರಿ ಭಟ್ಕಳದ ಹೆರೂರಿನ ಸೇತುವೆಯ ಬಳಿ ಬೆಳಕಿಗೆ ಬಂದಿದೆ.
ಸಾವನ್ನಪ್ಪಿದ ಕರು ಹೆರೂರಿನ ಗಣೇಶ ಹೆಬ್ಬಾರ್ ಎಂಬುವವರ ಮನೆಯವರದ್ದು ಎಂದು ತಿಳಿದು ಬಂದಿದೆ. ಬುಧವಾರ ಬೆಳಿಗ್ಗೆ ಮೇವಿಗೆ ಬಿಟ್ಟಿದ್ದ ಕರು ರಾತ್ರಿಯಾದರೂ ಮನೆಗೆ ವಾಪಸ್ಸು ಬಂದಿಲ್ಲವಾಗಿದ್ದನ್ನು ಕಂಡು ಮನೆ ಮಂದಿ ಹುಡುಕಾಟ ನಡೆಸಿದ್ದಾರೆ. ಮುಂಜಾನೆ ಕರು ಸತ್ತು ಬಿದ್ದಿರುವುದನ್ನು ಅಕ್ಕಪಕ್ಕದ ಮನೆಯವರು ತಿಳಿಸಿದ್ದು, ಹುಲಿ ದಾಳಿಯ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮೃತ ಪಟ್ಟ ಕರುವನ್ನು ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಪಶು ವೈದ್ಯ ಡಾ. ಮಿಥುನ ಹಾಗೂ ಸಿಬ್ಬಂದಿಗಳು ಕರುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಕಾಡು ಪ್ರಾಣಿಗಳ ಹಾವಳಿ: ಕೋಣಾರ ವ್ಯಾಪ್ತಿಯಲ್ಲಿ ಈಗಾಗಲೇ ಕಾಡು ಪ್ರಾಣಿಗಳಾದ ಹುಲಿ, ಚಿರತೆ, ಕಾಡು ಹಂದಿ, ಮಂಗಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯೂ ಹೆಚ್ಚಿನ ನಿಗಾ ಇಡಬೇಕಾಗಿದೆ. ಕಾಡು ಪ್ರಾಣಿಗಳಿಂದ ಹೈನುಗಾರಿಕೆ, ಕೃಷಿ ನಂಬಿಕೊಂಡು ಜೀವನ ನಡೆಸುವವರ ಸ್ಥಿತಿ ದುಸ್ಥರವಾಗಿದೆ.