ಕಾರವಾರ: ಉತ್ತರಕನ್ನಡ ಲೋಕಸಭಾ ವ್ಯಾಪ್ತಿಯ ಯುವ ಮತದಾರರನ್ನು ಆಕರ್ಷಿಸುವ ಮತ್ತು ಮತದಾನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯು ಆಯ್ದ ಕೆಲ ಯುವ ಮತದಾರರಿಗೆ ಕಡಲಾಳದಲ್ಲಿ ಮತದಾರರ ಚೀಟಿ ವಿತರಿಸುವ ಮೂಲಕ ಗಮನ ಸೆಳೆದಿದೆ.
ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ನೇತ್ರಾಣಿ ದ್ವೀಪದ ಬಳಿ ಇದೇ ಮೊದಲು ಮತದಾರರಾಗಿರುವ ಯುವ ಮತದಾರರಿಗೆ ಕಡಲಾಳದಲ್ಲಿ ಅವರ ಮತದಾರರ ಚೀಟಿಯನ್ನು ವಿತರಿಸುವ ಮೂಲಕ ಕ್ಷೇತ್ರದ ಯುವ ಸಮುದಾಯವನ್ನು ಆಕರ್ಷಿಸಲಾಯಿತು.
ಜಿಲ್ಲಾಧಿಕಾರಿ ಡಾ.ಹರೀಶ್‌ಕುಮಾರ್ ಕೆ. ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್ ನೇತೃತ್ವದ ತಂಡ ನೇತ್ರಾಣಿಯ ಕಡಲಾಳದಲ್ಲಿ ಯುವ ಮತದಾರರಿಗೆ ಮತದಾರರ ಚೀಟಿಯನ್ನು ವಿತರಿಸಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಮತದಾರರು ತಪ್ಪದೆ ಮತ ಚಲಾಯಿಸಬೇಕು ಎಂದು ಸ್ಕೂಬಾ ಸನ್ನೆ ಮಾಡುವ ಮೂಲಕ ವಿನಂತಿಸಿದರು.
ಮುರುಡೇಶ್ವರದಿಂದ ಅರಬ್ಬಿ ಆಳ ಸಮುದ್ರದಲ್ಲಿ ಸುಮಾರು 20 ಕಿ.ಮೀ. ದೂರದಲ್ಲಿರುವ ನೇತ್ರಾಣಿ ಗುಡ್ಡದಲ್ಲಿ ಈ ಚಟುವಟಿಕೆಯನ್ನು ನಡೆಸಲಾಗಿದ್ದು ಹೊಸ ಮತದಾರರಾದ ಮುಟ್ನಳ್ಳಿ ರೂಪೇಶ್ ಗಜಾನನ ನಾಯ್ಕ, ಮಾವಳ್ಳಿಯ ವಿಘ್ನೇಶ್ ಸುಬ್ರಾಯ ದೇವಾಡಿಗ, ಗಣೇಶ್ ಶಿವಾನಂದ ದೇವಾಡಿಗ, ಮುಂಡಳ್ಳಿಯ ವಿನಾಯಕ ವೆಂಕಟರಮಣ ನಾಯ್ಕ ಅವರಿಗೆ ಮತದಾರರ ಚೀಟಿ ವಿತರಿಸಲಾಯಿತು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಾವು ತಪ್ಪದೆ ಮತ ಚಲಾಯಿಸುತ್ತೇವೆ ಹಾಗೂ ಮತ ಚಲಾಯಿಸುವಂತೆ ಬೇರೆ ಮತದಾರರಿಗೂ ಪ್ರೇರೇಪಿಸುತ್ತೇವೆ ಎಂದು ಯುವ ಮತದಾರರು ಹೇಳಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ವಿನಾಯಕ ವಿ. ಪಾಟೀಲ್, ಕುಮಟಾ ಸಹಾಯಕ ಕಮಿಷನರ್, ಪ್ರೀತಿ ಗೆಹ್ಲೂಟ್, ಐಎಎಸ್ ಪರೀಕ್ಷಾರ್ಥಿ ದಿಲೀಶ್ ಸಸಿ, ಐಪಿಎಸ್ ಪರೀಕ್ಷಾರ್ಥಿಗಳಾದ ತುಷಾರ್ ದುಡಿ, ಪಿ.ಶ್ರೇಷ್ಠ ಉಪಸ್ಥಿತರಿದ್ದರು.