ಕಾರವಾರ : ಜಿಲ್ಲೆಯ ಭಟ್ಕಳದಲ್ಲಿ ಇಂದು ಮತ್ತೆ 12 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದ ಬಗ್ಗೆ ಮಾಹಿತಿ ನೀಡದ ಕಾರಣ ಒಂದೇ ಕುಟುಂಬದ 10 ಜನ ಸೇರಿ ಮತ್ತಿಬ್ಬರಿಗೆ ಹರಡಲು ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ ಹರೀಶ್‌ಕುಮಾರ್ ಮಾಹಿತಿ ನೀಡಿದ್ದಾರೆ.
ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಭಟ್ಕಳದ ಮೂರು ಕುಟುಂಬಗಳು ಚಿಕಿತ್ಸೆಗೆಂದು ತೆರಳಿದ್ದವು. ಏಪ್ರಿಲ್ ಮೊದಲ ವಾರದಲ್ಲಿ ಮೊದಲ ಕುಟುಂಬ, ಏಪ್ರಿಲ್ 16 ರಂದು ಎರಡನೇಯ ಕುಟುಂಬ ತೆರಳಿತ್ತು. ಇದಾದ ಬಳಿಕ ಏಪ್ರಿಲ್ 20ರಂದು ತೆರಳಿದ್ದ ಕುಟುಂಬದವರಿಗೆ ಕೊರೊನಾ ಸೋಂಕು ತಗುಲಿದೆ. ಒಂದೇ ಕುಟುಂಬದ ಹತ್ತು ಮಂದಿ ಸದಸ್ಯರಿಗೆ ಇದೀಗ ಸೋಂಕು ತಗುಲಿದೆ. ಜೊತೆಗೆ ಪಕ್ಕದ ಮನೆಯ ಓರ್ವ ಸಂಬಂಧಿ, ಸೋಂಕಿತೆಯ ಸ್ನೇಹಿತೆ ಸೇರಿದಂತೆ ಇದೀಗ 12 ಮಂದಿಯಲ್ಲೂ ಕೊರೊನಾ ಪಾಸಿಟಿವ್ ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವೈದ್ಯಕೀಯ ಕಾರಣಕ್ಕಾಗಿ ಹೊರ ಜಿಲ್ಲೆಗೆ ಹೋಗಿ ಬಂದವರಲ್ಲಿ ಕೊರೊನಾ ಕಾಣಿಸಿಕೊಂಡಿದ್ದರಿಂದ ಈಗಾಗಲೇ ಆಸ್ಪತ್ರೆಗೆ ಹೋಗಿ ಬಂದವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಸೋಂಕಿತೆ P-659 ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 20 ಮಂದಿ ಪೈಕಿ 12 ಜನರಿಗೆ ಮಾತ್ರ ಕೊರೊನಾ ಪತ್ತೆಯಾಗಿದೆ. ದ್ವಿತೀಯ ಸಂಪರ್ಕಕ್ಕೆ ಬಂದಿರುವ 50ಕ್ಕೂ ಅಧಿಕ ಮಂದಿಯ ವರದಿ ಬರಬೇಕಿದೆ ಎಂದರು.
ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಂಡ ಭಟ್ಕಳ ಮೂಲದವರ ಮಾಹಿತಿಯನ್ನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಿಂದ ಕೇಳಲಾಗಿದೆ. ಭಟ್ಕಳ ಕಂಟೈನ್‌ಮೆಂಟ್ ಝೋನ್‌ನಲ್ಲಿರುವುದರಿಂದ ಭಯಪಡಬೇಕಾಗಿಲ್ಲ. ಹೀಗಾಗಿ ಜಿಲ್ಲೆಯ ಇತರೆ ಸ್ಥಳಗಳಲ್ಲಿ ಲಾಕ್‌ಡೌನ್ ರಿಲ್ಯಾಕ್ಸೇಷನ್ ಯಥಾಸ್ಥಿತಿ ಮುಂದುವರೆಯಲಿದೆ. ಜೊತೆಗೆ ಕಂಟೈನ್‌ಮೆಂಟ್ ಝೋನ್ ಇರುವ ಭಟ್ಕಳದಲ್ಲಿ ಹಾಟ್‌ಸ್ಪಾಟ್‌ಗಳನ್ನ ಗುರುತಿಸಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.