ಶಿರಸಿ : 'ಮಳೆ ನಿಂತು ಹೋದ ಮೇಲೆ' ಉತ್ತರ ಕನ್ನಡ ಜಿಲ್ಲೆಯ ರೈತರ ಬದುಕಿಗೆ 'ದನಿ ಇಲ್ಲದಂತಾಗಿದೆ'. ಕಳೆದ ಕೆಲವು ದಿನಗಳಿಂದ ಸುರಿದ ಭಾರಿ ಮಳೆಯಿಂದ ಜಿಲ್ಲೆಯ ವಿವಿಧೆಡೆ ಅಪಾರ ಪ್ರಮಾಣದ ಕೃಷಿ ನಾಶವಾಗಿದೆ. ಅದರಲ್ಲೂ ಶಿರಸಿಯ ಪೂರ್ವ ಭಾಗದಲ್ಲಿ ಅನಾನಸ್, ಶುಂಠಿ, ಭತ್ತ ಸೇರಿ ನೂರಾರು ಎಕರೆ ಬೆಳೆಗಳು ಹಾಳಾಗಿದ್ದರಿಂದ ಅನ್ನದಾತರಿಗೆ ಇನ್ನಿಲ್ಲದ ನಷ್ಟ ಉಂಟಾಗಿದೆ. ಆದರೆ ರೈತರ ಗೋಳನ್ನು ಮಾತ್ರ ಯಾರೂ ಕೇಳುವವರಿಲ್ಲ ಎಂಬಂತಾಗಿದೆ.
ಬನವಾಸಿ ಸುತ್ತಮುತ್ತ ವರದಾ ನದಿಯಿಂದಾಗಿ ಪ್ರತಿ ಬಾರಿ ಮಳೆಯಿಂದ ನಷ್ಟ ಅನುಭವಿಸುವಂತೆ ಈ ಬಾರಿಯೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನಾನಸ್, ಶುಂಠಿ, ಭತ್ತ, ಬಾಳೆ ಬೆಳೆಗಳ ಜೊತೆಗೆ ದೀರ್ಘಾವಧಿ ಬೆಳೆಯಾದ ಅಡಿಕೆ ತೋಟಗಳಿಗೂ ಸಹ ಸಾಕಷ್ಟು ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಆದರೆ ಇದ್ಯಾವುದು ಸರ್ಕಾರದ ಕಿವಿಗೆ ಮಾತ್ರ ತಲುಪುತ್ತಿಲ್ಲ ಎನ್ನುವುದು ರೈತರ ಅಳಲಾಗಿದೆ.
ಕಳೆದ ವರ್ಷವೂ ಬನವಾಸಿ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಭತ್ತದ ಬೆಳೆ ನಾಶವಾಗಿತ್ತು. ಸಾವಿರಾರು ರೂ. ಸಾಲ ಮಾಡಿ ಬೆಳೆದ ಬೆಳೆ ಕೈಗೆ ಸಿಗದೇ ನೀರಿನಲ್ಲಿ ಹೋಮ ಮಾಡಿದಂತಾಗಿತ್ತು. ಅಲ್ಲದೆ ಶುಂಠಿ ಬೆಳೆ ಕೊಳೆತು ಹೋಗಿತ್ತು. ಬಾಳೆ ಮುರಿದು ಬಿದ್ದು, ಅನಾನಸ್ ಮಣ್ಣು ಪಾಲಾಗಿದ್ದವು. ಬೆಳೆ ನಾಶ ಪರಿಹಾರಕ್ಕೆ ಆಗ್ರಹ ವ್ಯಕ್ತವಾಗಿತ್ತು. ಆದರೆ ಸರ್ಕಾರ ಮಾತ್ರ ಇದಕ್ಕೆ ಸ್ಪಂದಿಸಿರಲಿಲ್ಲ. ಈ ಬಾರಿಯಾದರೂ ಪರಿಹಾರ ಸಿಗಲಿ ಎಂಬುದು ಸಹಕಾರಿ ಸಂಘಗಳ ಒತ್ತಾಸೆಯಾಗಿದೆ.
ಒಟ್ಟಾರೆಯಾಗಿ ಮಳೆಯಿಂದ ದೊಡ್ಡ ಪ್ರಮಾಣದಲ್ಲಿ ರೈತರಿಗೆ ಬೆಳೆ ನಷ್ಟ ಉಂಟಾಗಿದೆ. ಮಳೆ ನಿಂತು ಹೋದ ಮೇಲೆ ಅದರ ಪರಿಣಾಮ ಗೊತ್ತಾಗುತ್ತಿದ್ದು, ಸಾಲ ಮಾಡಿ ಬೆಳೆದ ಬೆಳೆಗಳು ನೀರು ಪಾಲಾಗಿದೆ. ಸರ್ಕಾರ ರೈತರತ್ತ ಮುಖ ಮಾಡಿ ಪರಿಹಾರ ನೀಡಬೇಕು ಎಂಬ ಆಗ್ರಹ ರೈತರದ್ದಾಗಿದೆ.
ಇದನ್ನೂ ಓದಿ : ಉತ್ತರಕನ್ನಡದಲ್ಲಿ ಮಳೆ ಅವಾಂತರಕ್ಕೆ ಐವರು ಸಾವು; 600ಕ್ಕೂ ಹೆಚ್ಚು ಮನೆಗಳಿಗೆ ಹಾನಿ