ಕಾರವಾರ: ಅಕಾಲಿಕ ಮಳೆ ಹಿನ್ನೆಲೆಯಲ್ಲಿ ಬೆಳೆನಾಶವಾಗಿದೆ. ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿದ್ದ ರೈತರು ಇದೀಗ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಮುಖವಾಗಿ ಕುಮಟಾ, ಹೊನ್ನಾವರ ಸೇರಿ ಅನೇಕ ಕಡೆಗಳಲ್ಲಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ವಾಯುಭಾರ ಕುಸಿತದಿಂದಾಗಿ ಕಳೆದೊಂದು ತಿಂಗಳಿನಿಂದ ಉತ್ತರಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ವರುಣನ ಆರ್ಭಟಕ್ಕೆ ಅನ್ನದಾತ ನಲುಗಿ ಹೋಗಿದ್ದಾನೆ. ಉತ್ತಮ ಮಳೆಯಿಂದಾಗಿ ಗದ್ದೆಗಳಲ್ಲಿ ಸೊಂಪಾಗಿ ಬೆಳೆದು ನಿಂತಿದ್ದ ಭತ್ತದ ಬೆಳೆಯನ್ನು ಇನ್ನೇನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಮಳೆ ಪ್ರಾರಂಭವಾಗಿತ್ತು.
ಒಂದೆರಡು ದಿನಗಳಲ್ಲಿ ಕಡಿಮೆಯಾಗುತ್ತದೆ ಅಂದುಕೊಂಡಿದ್ದ ಮಳೆ ಡಿಸೆಂಬರ್ ತಿಂಗಳು ಪ್ರಾರಂಭವಾದರೂ ಸಹ ಕಡಿಮೆಯಾಗುವ ಲಕ್ಷಣಗಳೇ ಇಲ್ಲ. ಮಳೆ ಕಡಿಮೆಯಾಯ್ತು ಎಂದು ಕೆಲ ದಿನಗಳಿಂದ ಭತ್ತದ ಕಟಾವಿನಲ್ಲಿ ತೊಡಗಿದ್ದ ರೈತರಿಗೆ ಮತ್ತೆ ಮಳೆರಾಯ ಅಡ್ಡಿಯಾಗಿದ್ದು, ಗದ್ದೆಗಳಲ್ಲಿ ಕೊಯ್ದು ಹಾಕಲಾಗಿದ್ದ ಭತ್ತದ ತೆನೆ ನೀರಲ್ಲಿ ನೆನೆದು ಹಾಳಾಗಿದೆ. ಇಷ್ಟಾದರೂ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ಜಿಲ್ಲೆಯ ಕರಾವಳಿ ಭಾಗದಲ್ಲಿ ಅಕಾಲಿಕ ಮಳೆಯ ಪ್ರಮಾಣ ಹೆಚ್ಚೇ ಇದೆ. ಕುಮಟಾ, ಹೊನ್ನಾವರ, ಅಂಕೋಲಾ ಹಾಗೂ ಭಟ್ಕಳ ತಾಲೂಕುಗಳಲ್ಲಿ ಹೆಚ್ಚಿನ ಬೆಳೆ ಹಾನಿ ಸಂಭವಿಸಿದೆ. ಕೊಯ್ಲು ಮಾಡಿ ತೆನೆ ಇರಿಸಿದ್ದ ಗದ್ದೆಗಳಲ್ಲಿ ನೀರು ನಿಂತಿದೆ. ಪರಿಣಾಮ ತೆನೆಗಳು ನೀರಿನಲ್ಲಿ ನೆಂದು ಭತ್ತ ಉದುರಿ ಹೋಗುತ್ತಿದ್ದು, ಸಾಕಷ್ಟು ರೈತರು ಅಲ್ಪ ಬೆಳೆಯನ್ನಾದರೂ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ: ಶಾಸಕ ಎಸ್ಆರ್ ವಿಶ್ವನಾಥ್ ಕೊಲೆ ಸಂಚು ಪ್ರಕರಣ: ಕುಳ್ಳ ದೇವರಾಜ್ ಬಂಧಿಸಿದ ಪೊಲೀಸರು
ಮಳೆ ನಡುವೆಯೇ ಗದ್ದೆಯಲ್ಲಿ ನೆನೆಯುತ್ತಿರುವ ತೆನೆಗಳನ್ನು ಬದುಗಳ ಮೇಲೆ ಹಾಕುತ್ತಿದ್ದು, ಗದ್ದೆಗಳಲ್ಲಿ ನಿಂತಿರುವ ನೀರನ್ನು ಖಾಲಿ ಮಾಡುತ್ತಿದ್ದಾರೆ. ದುರಂತ ಎಂದರೆ ಸಾವಿರಾರು ಎಕರೆಯಲ್ಲಿ ಬೆಳೆ ಹಾನಿ ಸಂಭವಿಸಿದ್ದರೂ ಕೃಷಿ ಇಲಾಖೆಯ ಅಧಿಕಾರಿಗಳಾಗಲಿ, ವಿಮಾ ಕಂಪನಿಯ ಅಧಿಕಾರಿಗಳಾಗಲಿ ಜಮೀನುಗಳತ್ತ ಮುಖಮಾಡಿಲ್ಲ. ಕೆಲವೆಡೆ ನಾಮಕಾವಸ್ಥೆಗೆ ಭೇಟಿ ನೀಡಿ ಅಲ್ಪ ಪರಿಹಾರ ನೀಡೋದಾಗಿ ತಿಳಿಸಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಸಮರ್ಪಕ ಪರಿಹಾರವನ್ನು ಒದಗಿಸಬೇಕೆಂದು ಅನ್ನದಾತರು ಒತ್ತಾಯಿಸಿದ್ದಾರೆ.