ಭಟ್ಕಳ (ಉತ್ತರಕನ್ನಡ): ಮೀನುಗಾರರು ಬಲೆ ಹಾಕಿ ಮೀನುಗಳನ್ನು ಹಿಡಿಯೋದು ಸಾಮಾನ್ಯ. ಆದರೆ, ಮೀನಿಗಾಗಿ ಹಾಕಿದ ಬಲೆಯಲ್ಲಿ ಮೊಸಳೆ ಸಿಕ್ಕಿರುವ ಘಟನೆ ತಾಲೂಕಿನ ಅಳ್ವೆಕೊಡಿ ಸಮುದ್ರ ತೀರದಲ್ಲಿ ನಡೆದಿದೆ.
ಸಮುದ್ರದ ಅಬ್ಬರ ಹೆಚ್ಚಿರುವ ಕಾರಣ ಮೀನುಗಾರರು ಬುಧವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಅಳ್ವೆಕೊಡಿ ಸಮುದ್ರದ ಭಾಗದಲ್ಲಿ ಕೈ ರಂಪನೆ ಬಲೆ ಹಾಕಿ ಮೀನು ಹಿಡಿಯಲು ಪ್ರಯತ್ನಿಸುತ್ತಿದ್ದರು. 3 ಗಂಟೆಯ ಸುಮಾರಿಗೆ ಮೀನು ಹಿಡಿಯಲು ಹಾಕಿರುವ ಬಲೆಯಲ್ಲಿ ಮೀನುಗಳ ರಾಶಿಯೊಂದಿಗೆ ಭಾರೀ ಗಾತ್ರದ ಮೊಸಳೆಯೊಂದು ಪತ್ತೆಯಾಗಿದೆ. ಇದನ್ನು ನೋಡಿದ ಮೀನುಗಾರರು ಒಂದು ಕ್ಷಣ ಹೌಹಾರಿದ್ದಾರೆ.
ನಂತರ ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಮೊಸಳೆಯನ್ನು ಬಲೆಯಿಂದ ಬಿಡಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.