ಕಾರವಾರ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇತ್ತ ಕೇಂದ್ರದ ಘಟಾನುಘಟಿ ನಾಯಕರನ್ನು ಕರೆಸಿ ಪ್ರಚಾರ ಮಾಡಿಸಿದ್ದರೂ ಸಹ ಬಿಜೆಪಿ ಹೀನಾಯ ಸೋಲು ಕಂಡು ಮುಖಭಂಗ ಎದುರಿಸಿತು. ಇದೆಲ್ಲದರ ನಡುವೆ ಚುನಾವಣೆ ವೇಳೆ ಪ್ರಧಾನಿ ಮೋದಿ ಅವರನ್ನು ಕರೆಸಿ ಪ್ರಚಾರ ಸಭೆ ಆಯೋಜಿಸಿದ್ದ ಉತ್ತರಕನ್ನಡ ಜಿಲ್ಲೆಯ ಬಿಜೆಪಿ ಮುಖಂಡರಿಗೆ ಇದೀಗ ಸಂಕಷ್ಟ ಎದುರಾಗಿದೆ.
ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎನ್ನುವಂತೆ ಚುನಾವಣಾ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದವರಿಗೆ ಚುನಾವಣಾ ಆಯೋಗ ಈಗ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದಲ್ಲಿ ಮೇ 3ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಕೈಗೊಂಡಿದ್ದರು. ಈ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಎಲ್ಲಾ ತಾಲೂಕುಗಳ ಬಿಜೆಪಿ ಅಭ್ಯರ್ಥಿಗಳು ತಮ್ಮೊಂದಿಗೆ ನೂರಾರು ಬಸ್‌ಗಳ ಮೂಲಕ ತಮ್ಮ ಕಾರ್ಯಕರ್ತರನ್ನು ಮತ್ತು ಬೆಂಬಲಿಗರನ್ನು ಕರೆತಂದಿದ್ದರು.
ಅಭ್ಯರ್ಥಿಗಳು ಕೇವಲ ವೇದಿಕೆ ಕಾರ್ಯಕ್ರಮದ ಖರ್ಚನ್ನ ಮಾತ್ರ ಚುನಾವಣಾ ಆಯೋಗಕ್ಕೆ ತೋರಿಸಿದ್ದು, ನೂರಾರು ಬಸ್‌ಗಳಲ್ಲಿ ಕಾರ್ಯಕರ್ತರನ್ನು ಮತ್ತು ಬೆಂಬಲಿಗರನ್ನು ಕರೆತಂದಿದ್ದ ಖರ್ಚನ್ನು ಕಾರ್ಯಕರ್ತರು ಮತ್ತು ಮುಖಂಡರ ಮೇಲೆ ಹೊರಿಸಿದ್ದಾರೆ. ಪರಿಣಾಮ ನೀತಿಸಂಹಿತೆ ಉಲ್ಲಂಘನೆ ಆರೋಪದಡಿ ಜಿಲ್ಲೆಯ ಸುಮಾರು 200 ಬಿಜೆಪಿ ಕಾರ್ಯಕರ್ತರ ಮೇಲೆ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ:'ನಾವು 25 ಸಂಸದರು 5 ಕೆಜಿ ಅಕ್ಕಿ ಕೊಟ್ವಿ, ಕಾಂಗ್ರೆಸ್‌ನಲ್ಲೀಗ 135 ಶಾಸಕರಿದ್ದಾರೆ, 10 ಕೆಜಿ ಅಕ್ಕಿ ಕೊಡಲಿ ನೋಡೋಣ'
ಇನ್ನು ಪ್ರಧಾನಿ ಮೋದಿ ಸಮಾವೇಶದ ವೇದಿಕೆ ಕಾರ್ಯಕ್ರಮಕ್ಕೆ 1.3 ಕೋಟಿ ಖರ್ಚು ರೂಪಾಯಿ ಮಾಡಿದ್ದು, ಬಿಜೆಪಿಯ ಪ್ರತಿಯೊಬ್ಬ ಅಭ್ಯರ್ಥಿಗೆ 18 ಲಕ್ಷದಂತೆ ಚುನಾವಣಾ ಖರ್ಚು ಸೇರ್ಪಡೆಯಾಗಿದೆ. ಆರು ವಿಧಾನಸಭಾ ಕ್ಷೇತ್ರದಿಂದ 700ಕ್ಕೂ ಹೆಚ್ಚು ಬಸ್‌ಗಳನ್ನು 200 ಕಾರ್ಯಕರ್ತರ ಹೆಸರಿನಲ್ಲಿ ಬುಕ್ ಮಾಡಿದ್ದು 1.8 ಕೋಟಿ ರೂಪಾಯಿ ಖರ್ಚಾಗಿದೆ. ಇದನ್ನು ಆಧರಿಸಿ 200 ಮಂದಿ ಬಿಜೆಪಿ ಕಾರ್ಯಕರ್ತರ ಮೇಲೆ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ.
ಇನ್ನು ನೆರೆಯ ಗೋವಾದ ಸಾಕಷ್ಟು ಬಸ್‌ಗಳನ್ನು ಪ್ರಚಾರ ಸಭೆಗೆ ಕಾರ್ಯಕರ್ತರನ್ನು ಮತ್ತು ಬೆಂಬಲಿಗರನ್ನು ಕರೆದೊಯ್ಯಲು ಬಳಸಿಕೊಂಡಿದ್ದು, ಈ ಕುರಿತು ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ ಅಭ್ಯರ್ಥಿಗಳು ತಾವು ತಪ್ಪಿಸಿಕೊಳ್ಳಲು ಅಮಾಯಕ ಕಾರ್ಯಕರ್ತರ ಮೇಲೆ ತಪ್ಪು ಹೊರಿಸಿದೆ. ಈ ಬಗ್ಗೆ ಚುನಾವಣಾ ಆಯೋಗ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್ ಕಾರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ ಒತ್ತಾಯಿಸಿದ್ದಾರೆ.
ಒಟ್ಟಾರೇ ಚುನಾವಣೆ ಮುಗಿದ ಬಳಿಕ ಪ್ರಚಾರದ ಲೆಕ್ಕಾಚಾರ ಇದೀಗ ಬಿಜೆಪಿಗೆ ಕಂಟಕವಾಗಿ ಪರಿಣಮಿಸಿದ್ದು, ಈ ಸಂಬಂಧ ಚುನಾವಣಾ ಆಯೋಗ ಯಾವ ಕ್ರಮ ಕೈಗೊಳ್ಳಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ.
ಇದನ್ನೂ ಓದಿ: ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ರಾಜಕೀಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್