ಕಾರವಾರ: ಕೊರೊನಾ ವೈರಸ್‌ನಿಂದಾಗಿ ಜಗತ್ತು ಬೆಚ್ಚಿಬಿದ್ದಿದೆ. ಸೋಂಕು ತಡೆಗಟ್ಟುವುದೇ ಇದೀಗ ಸರ್ಕಾರಗಳಿಗೆ ದೊಡ್ಡ ಸವಾಲಾಗಿದೆ. ಆದರೆ ಸೋಂಕಿತರ ಪತ್ತೆ ಹಾಗೂ ಸುರಕ್ಷಾ ಕವಚದೊಂದಿಗೆ ವೈದ್ಯರು ನೀಡುವ ಚಿಕಿತ್ಸಾ ಕ್ರಮಗಳ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತ ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದೆ.
ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚಾಗತೊಡಗಿವೆ. ಆದರೆ ಉತ್ತರಕನ್ನಡ ಜಿಲ್ಲೆ ಸದ್ಯ ಹತೋಟಿಗೆ ಬಂದಿದೆಯಾದರೂ ಇಲ್ಲಿನ ಜಿಲ್ಲಾಡಳಿತ ಮುಂಜಾಗೃತಾ ಕ್ರಮವಾಗಿ 250 ಬೆಡ್ಗಳ ಕೊರೊನಾ ಚಿಕಿತ್ಸಾ ವಾರ್ಡ್ ಸಿದ್ಧಪಡಿಸಿದೆ.
ಇನ್ನು ಚಿಕಿತ್ಸೆಗೆಂದು ಬರುವವರನ್ನು ಮೊದಲು ಜಿಲ್ಲಾ ಆಸ್ಪತ್ರೆ ಆರಂಭದಲ್ಲಿ ತೆರೆದಿರುವ ಫೀವರ್ ಕ್ಲಿನಿಕ್‌ನಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತದೆ. ವ್ಯಕ್ತಿಗೆ ನೆಗಡಿ, ಕೆಮ್ಮು, ಜ್ವರ ಇತ್ಯಾದಿ ಲಕ್ಷಣಗಳು ಕಂಡುಬಂದಲ್ಲಿ ಥರ್ಮಲ್ ಸ್ಕ್ಯಾನಿಂಗ್ ನಡೆಸಲಾಗುತ್ತದೆ. ಸೋಂಕಿನ ಲಕ್ಷಣ ಕಂಡುಬಂದಲ್ಲಿ ಆತನ ಗಂಟಲು ದ್ರವವನ್ನು ತೆಗೆದು ಪರೀಕ್ಷೆಗೆ ಕಳುಹಿಸಲಾಗುತ್ತದೆ. ಒಂದೊಮ್ಮೆ ವರದಿ ದೃಢಪಟ್ಟಲ್ಲಿ ಕೊರೊನಾ ಚಿಕಿತ್ಸಾ ವಾರ್ಡ್‌ಗೆ ಶಿಫ್ಟ್ ಮಾಡಲಾಗುತ್ತದೆ. ಸೋಂಕಿತ ಗಂಭೀರ ಸ್ಥಿತಿಯಲ್ಲಿದ್ದರೆ ಐಸೊಲೇಷನ್ ವಾರ್ಡ್‌ಗೆ ಶಿಫ್ಟ್ ಮಾಡಲಾಗುತ್ತದೆ.
ಇನ್ನು ಈಗಾಗಲೇ ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ಟೆಸ್ಟ್ ಲ್ಯಾಬ್ ಸಹಿತ ಅತ್ಯಾಧುನಿಕ ಉಪಕರಣಗಳನ್ನೊಳಗೊಂಡ ವಾರ್ಡ್ ಸಿದ್ಧವಿದ್ದು ಯಾವುದೇ ಸಂದರ್ಭದಲ್ಲೂ ಚಿಕಿತ್ಸೆಗೆ ವೈದ್ಯರು ಕೂಡ ಸಿದ್ಧರಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ಈ ಬಗ್ಗೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ. ರೋಷನ್ ತಿಳಿಸಿದ್ದಾರೆ.