ಕಾರವಾರ: ಉತ್ತರ ಕನ್ನಡ ಜಿಲ್ಲೆ ತಾನು ಹೊಂದಿರುವ ಹತ್ತು ಹಲವು ಪ್ರವಾಸಿ ತಾಣಗಳ ಮೂಲಕವೇ ರಾಜ್ಯ, ಹೊರರಾಜ್ಯ ಜತೆಗೆ ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರನ್ನ ನನ್ನತ್ತ ಸೆಳೆದಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಅಟ್ಟಹಾಸ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆ ಮೇಲೆ ಸಾಕಷ್ಟು ಹೊಡೆತ ನೀಡಿತ್ತು. ಸದ್ಯ ಪ್ರವಾಸಿಗರ ಆಗಮನದೊಂದಿಗೆ ಸುಧಾರಿಸಿಕೊಳ್ಳುತ್ತಿರುವ ಪ್ರವಾಸೋದ್ಯಮಕ್ಕೆ ಕೊರೊನಾ 3ನೇ ಅಲೆಯ ಆತಂಕ ಎದುರಾಗಿದೆ.
ಮತ್ತೆ ಪ್ರವಾಸೋದ್ಯಮ ನೆಲಕಚ್ಚುವ ಆತಂಕ
ಪ್ರವಾಸಿಗರ ಸ್ವರ್ಗ ಎಂದೇ ಕರೆಯಲಾಗುತ್ತಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಡಲ ತೀರಗಳು, ಇನ್ನೊಂದೆಡೆ ಘಟ್ಟದ ಮೇಲಿನ ತಾಲೂಕುಗಳಲ್ಲಿನ ಜಲಪಾತಗಳು, ದೇವಸ್ಥಾನ, ರೆಸಾರ್ಟ್, ಹೀಗೆ ಹತ್ತಾರು ಪ್ರವಾಸಿ ತಾಣಗಳು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನ ಜಿಲ್ಲೆಯತ್ತ ಕೈಬೀಸಿ ಕರೆಯುತ್ತವೆ.
ಆದರೆ, ರಾಜ್ಯದ ಕೆಲ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರವಾಸೋದ್ಯಮ ಚಟುವಟಿಕೆ ಮತ್ತೆ ಸ್ಥಗಿತಗೊಳ್ಳುವ ಆತಂಕ ಕಾಡುತ್ತಿದೆ. ವರ್ಷಾಂತ್ಯದ ಡಿಸೆಂಬರ್ ತಿಂಗಳಲ್ಲಿ ಪ್ರತಿವರ್ಷ ಸಾಕಷ್ಟು ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಿದ್ದರು. ಅಲ್ಲದೇ ಇದೀಗ ಮದುವೆಗಳ ಸೀಸನ್ ಸಹ ಆಗಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಹೊರಜಿಲ್ಲೆ, ರಾಜ್ಯಗಳಿಂದ ಜನರು ಆಗಮಿಸುತ್ತಾರೆ. ಆದರೆ, ಪ್ರವಾಸಿಗರ ಆಗಮನದೊಂದಿಗೆ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾದಲ್ಲಿ ಮತ್ತೆ ಪ್ರವಾಸೋದ್ಯಮ ನೆಲಕಚ್ಚುವ ಆತಂಕ ಎದುರಾಗಿದೆ.
ಮುನ್ನೆಚ್ಚರಿಕೆ ವಹಿಸುವಂತೆ ಆಗ್ರಹ:
ಜಿಲ್ಲೆಯ ದಾಂಡೇಲಿ, ಗೋಕರ್ಣ, ಮುರ್ಡೇಶ್ವರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಂಬಿಕೊಂಡೇ ಸಾವಿರಾರು ಮಂದಿ ಜೀವನ ಸಾಗಿಸುತ್ತಿದ್ದಾರೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವರಿಗೆ ಪ್ರವಾಸೋದ್ಯಮ ಉದ್ಯೋಗ ನೀಡಿದೆ.
ಸದ್ಯ ಕೊರೊನಾದಿಂದ ಪ್ರವಾಸೋದ್ಯಮಕ್ಕೆ ಹಿನ್ನೆಡೆಯಾದರೆ ಕಷ್ಟವಾಗಲಿದೆ. ಅಲ್ಲದೇ ಕಳೆದ ಬಾರಿಯಂತೆ ಕೊರೊನಾ ಹೆಚ್ಚಳವಾದ ಬಳಿಕ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಲ್ಲಿ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂಬುವುದು ಸ್ಥಳೀಯರ ಆಗ್ರಹ.
ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ತೊಂದರೆಯಾಗದಂತೆ ಕೋವಿಡ್ ನಿಯಮಾವಳಿಗಳನ್ನ ಜಾರಿಗೆ ಮಾಡುತ್ತೇವೆ. ಈಗಾಗಲೇ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ 15 ದಿನಕ್ಕೊಮ್ಮೆ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಜನರು ಸಹ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.
ಸದ್ಯ ಹೊಸ ವರ್ಷವನ್ನ ಸ್ವಾಗತಿಸಲು ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಸಜ್ಜಾಗಿವೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ನಿರೀಕ್ಷೆಯಿದ್ದು, ಒಂದೊಮ್ಮೆ ಕೋವಿಡ್ ಹೆಚ್ಚಾದರೆ ಈ ಬಾರಿ ಹೊಸ ವರ್ಷಾಚರಣೆಗೂ ತೊಡಕಾಗಲಿದೆ ಎನ್ನುವುದು ಜನರ ಅಭಿಪ್ರಾಯ.
ಇದನ್ನೂ ಓದಿ: ಹೊಸ ಕೋವಿಡ್ ರೂಪಾಂತರದ ಬಗ್ಗೆ ನಿಮಗೆಷ್ಟು ಗೊತ್ತು.. ಏನಿದು ಒಮಿಕ್ರೋನ್?