ಉತ್ತರಕನ್ನಡ: ಭಟ್ಕಳ ತಾಲೂಕು ಆರೋಗ್ಯ ಇಲಾಖೆಯೂ ಜಿಲ್ಲಾಧಿಕಾರಿಗಳ ಸೂಚನೆಯಂತೆ ಕೊರೊನಾ ವೈರಸ್ ಕುರಿತಾಗಿ ಜನರಿಗೆ ಸೂಕ್ತ ಜಾಗೃತಿ ಹಾಗೂ ಮಾರ್ಗದರ್ಶನ ನೀಡುತ್ತಿದೆ ಎಂದು ತಹಶೀಲ್ದಾರ್ ವಿ.ಪಿ.ಕೊಟ್ರಳ್ಳಿ ಹೇಳಿದರು.
ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಜನರು ಸಾರ್ವಜನಿಕ ಸ್ಥಳದಲ್ಲಿ ಉಗುಳಬಾರದು ಹಾಗೂ ಈ ರೋಗ ತಡೆಗಟ್ಟುವ ವಿಚಾರದಲ್ಲಿ ಇಲಾಖೆ ನೀಡುವ ಮಾಹಿತಿಯನ್ನು ಪಡೆದು ಮುಂಜಾಗೃತೆ ವಹಿಸಬೇಕು ಎಂದರು.
ಇದೇ ವೇಳೆ ತಾಲೂಕು ಆರೋಗ್ಯಾಧಿಕಾರಿ. ಡಾ. ಮೂರ್ತಿರಾಜ್ ಭಟ್ ಮಾತನಾಡಿ, ಭಟ್ಕಳ ತಾಲೂಕಿನಲ್ಲಿ ರೋಗದ ಲಕ್ಷಣ ಕಂಡು ಬಂದಿಲ್ಲ. ಜಿಲ್ಲಾಡಳಿತ ಆದೇಶದಂತೆ ತಾಲೂಕಿನ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಮುಂಜಾಗೃತಾ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಇನ್ನು ಈ ರೋಗವನ್ನು ಚಿಕಿತ್ಸೆ ಮೂಲಕ ಗುಣಪಡಿಸಬಹುದಾಗಿದೆ ಎಂದರು.
ಭಟ್ಕಳ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಮಾತನಾಡಿ, ಮುಂಜಾಗೃತಾ ಕ್ರಮವಾಗಿ ಸರಕಾರಿ ಆಸ್ಪತ್ರೆಯಲ್ಲಿ 9 ಹಾಸಿಗೆಯ ಪ್ರತ್ಯೇಕ ವಾರ್ಡನ್ನು ಸಿದ್ದಪಡಿಸಲಾಗಿದೆ. ಪರ್ಸನಲ್ ಪ್ರೊಟೆಕ್ಷಶನ್ ಇಕ್ವಿಪಿಮೆಂಟ್ಗಳನ್ನು ಸಿದ್ಧ ಮಾಡಲಾಗಿದೆ. ಮೂರು ವಿವಿಧ ಮಾಸ್ಕ್ಗಳು ಸಹ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದರು.