ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಹೋಮ್ ಕ್ವಾರಂಟೈನ್ ಆಗಿದ್ದಾರೆ.
ಸೋಂಕಿನ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರು ಕಾರವಾರದ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ಪ್ರಯೋಗಾಲಯಕ್ಕೆ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದರು. ವರದಿಯಲ್ಲಿ ಪಾಸಿಟಿವ್ ಬಂದಿದೆ.
ಇತ್ತೀಚೆಗಷ್ಟೆ ಅವರ ಪತ್ನಿಗೆ ಹೆರಿಗೆ ಆಗಿದ್ದು, ಸಿಇಒ ಮನೆಯಲ್ಲಿಯೇ ಪ್ರತ್ಯೇಕ ಕೋಣೆಯಲ್ಲಿ ಹೋಂ ಐಸೋಲೇಷನ್ ಆಗಿದ್ದಾರೆ. ಅವರ ಹೆಂಡತಿ ಮತ್ತು ಒಂದು ತಿಂಗಳ ಮಗುವಿನ ಗಂಟಲು ದ್ರವದ ಮಾದರಿಯನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ.
ನನ್ನ ಕೋವಿಡ್ ವರದಿಯಲ್ಲಿ ಪಾಸಿಟಿವ್ ಬಂದಿದ್ದು, ಲಕ್ಷಣ ಕಾಣಿಸಿಕೊಂಡ ದಿನದಿಂದ ಹೋಮ್ ಕ್ವಾರಂಟೈನ್ ಇದ್ದೇನೆ. ಆದರೂ ನನ್ನನ್ನು ಕಳೆದ ಮೂರು ದಿನಗಳಲ್ಲಿ ಯಾರಾದರೂ ಸಂಪರ್ಕಿಸಿದ್ದರೆ ದಯವಿಟ್ಟು ಸಮೀಪದ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.