ಭಟ್ಕಳ: ಕೊರೊನಾ ಮಹಾಮಾರಿ ಭೀತಿಯ ನಡುವೆ, ರೂಪಾಂತರ ಹೊಂದಿದ ಕೋವಿಡ್ ವೈರಾಣು ಆಕ್ರಮಣದ ಸುದ್ದಿ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಹಾಗೂ ಸಾರ್ವಜನಿಕ ಮುಖಂಡರ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ವೈದ್ಯಾಧಿಕಾರಿ ಡಾ.ಶರದ್ ನಾಯಕ್, ಹೊಸ ವೈರಸ್ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. ಬೇರೆ ದೇಶಗಳಿಂದ ಯಾರಾದರೂ ಬಂದಿದ್ದರೆ ಕೂಡಲೇ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ವಿಮಾನ ನಿಲ್ದಾಣದಲ್ಲಿಯೂ ಈ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಓದಿ: ಬ್ರಿಟನ್ನಿಂದ ಬಂದ 151 ಪ್ರಯಾಣಿಕರು ನಾಟ್ ರೀಚಬಲ್, ಹುಡುಕಾಟದಲ್ಲಿ ಬಿಬಿಎಂಪಿ..!
ಅಧಿಕಾರಿಗಳ ಮನೆ, ಮನೆ ಭೇಟಿ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖಂಡರು, ವಿದೇಶದಿಂದ ಯಾರೇ ಬಂದರೂ ವಿಮಾನ ನಿಲ್ದಾಣದಲ್ಲಿ ಮಾಹಿತಿ ಸಿಗುತ್ತದೆ. ಅಲ್ಲಿಯೇ ಅವರನ್ನು ಪರೀಕ್ಷೆಗೆ ಒಳಪಡಿಸಿ. ಪಾಸಿಟಿವ್ ಬಂದರೆ ಕ್ವಾರಂಟೈನ್‍ಗೆ ಒಪ್ಪಿಸಿ, ನೆಗೆಟಿವ್ ಬಂದರೆ ಮನೆಗೆ ಕಳುಹಿಸಿ. ಅದನ್ನು ಬಿಟ್ಟು ಮನೆ ಮನೆ ಭೇಟಿಗೆ ಮುಂದಾದರೆ ಮತ್ತೆ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗುತ್ತದೆ ಎಂದು ಅಸಮಾಧಾನ ಹೊರ ಹಾಕಿದರು.