ಕಾರವಾರ: ಕಳೆದ ಬಾರಿ ಇದೇ ಸಂದರ್ಭ ಜಿಲ್ಲೆಯಲ್ಲಿ ಮಂಗನಕಾಯಿಲೆ ಹೆಚ್ಚಳಗೊಂಡು ಜನರನ್ನು ಆತಂಕಕ್ಕೀಡು ಮಾಡಿತ್ತು. ಮಲೆನಾಡಿನಲ್ಲಿ ಮರಣಮೃದಂಗ ಬಾರಿಸಿದ್ದ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್‌ಡಿ) ಜಿಲ್ಲೆಯ 50ಕ್ಕೂ ಅಧಿಕ ಮಂದಿಯಲ್ಲಿ ಕಾಣಿಸಿಕೊಂಡಿತ್ತು. ಈ ಬಾರಿಯೂ ಸಹ ಈಗಾಗಲೇ ಓರ್ವರಲ್ಲಿ ಕೆಎಫ್‌ಡಿ ಸೋಂಕು ದೃಢಪಟ್ಟಿದ್ದು, ಮತ್ತೆ ಮಂಗನಕಾಯಿಲೆ ಜಿಲ್ಲೆಗೆ ಕಾಲಿಟ್ಟಂತಾಗಿದೆ. ಇನ್ನೇನು ಕೊರೊನಾ ಆತಂಕ ಕಡಿಮೆಯಾಯಿತು ಎನ್ನುವ ವೇಳೆಗೆ ಮಂಗನಕಾಯಿಲೆ ಆತಂಕ ಎದುರಾಗಿದ್ದು, ಗ್ರಾಮೀಣ ಭಾಗದ ಜನರಲ್ಲಿ ಭಯಭೀತಿಯನ್ನು ಉಂಟುಮಾಡಿದೆ.
ಕಳೆದ ಬಾರಿ ಜಿಲ್ಲೆಯ ಸಿದ್ದಾಪುರ ಹಾಗೂ ಹೊನ್ನಾವರ ತಾಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಮಂಗನಕಾಯಿಲೆ ಸೋಂಕು ಕಾಣಿಸಿಕೊಂಡಿದ್ದು, ಇದೀಗ ಸಿದ್ದಾಪುರ ಭಾಗದ ಓರ್ವ ಮಹಿಳೆಯಲ್ಲಿ ಕೆಎಫ್‌ಡಿ ದೃಢಪಟ್ಟಿದೆ. ಈಗಾಗಲೇ ಸೋಂಕಿತೆಯನ್ನು ಮಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆದ್ರೆ ಗ್ರಾಮೀಣ ಭಾಗದಲ್ಲಿ ಕೆಎಫ್‌ಡಿ ಸೋಂಕು ಪತ್ತೆಗೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿಲ್ಲ. ಇದು ಗ್ರಾಮೀಣ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲಿ ಸೋಂಕಿತರ ಪತ್ತೆಗೆ ತ್ವರಿತ ಕ್ರಮವನ್ನು ಕೈಗೊಳ್ಳುವ ಜಿಲ್ಲಾಡಳಿತ ಮಂಗನಕಾಯಿಲೆ ಪತ್ತೆಗೆ ಹೆಚ್ಚು ಗಮನಹರಿಸುತ್ತಿಲ್ಲ.
ಹೀಗಾಗಿ ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಗಮನಹರಿಸಬೇಕು ಅನ್ನೋದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಶಸ್ತ್ರ ಚಿಕಿತ್ಸೆಗೆ ಒಳಗಾದ ಸಂಸದ ಅನಂತಕುಮಾರ್ ಹೆಗಡೆ
ಮಂಗಗಳಲ್ಲಿ ಕಾಣಿಸಿಕೊಳ್ಳುವ ಮಂಗನಕಾಯಿಲೆ ಅವುಗಳಿಗೆ ಕಚ್ಚಿದ ಒಣಗು ಒಂದಕ್ಕಿಂತ ಹೆಚ್ಚಿನ ಬಾರಿ ಕಚ್ಚಿದಾಗ ಮನುಷ್ಯರಲ್ಲೂ ಈ ರೋಗ ಕಾಣಿಸಿಕೊಳ್ಳುತ್ತದೆ. ಜಿಲ್ಲೆಯಲ್ಲಿ ಹೆಚ್ಚಾಗಿ ರೈತಾಪಿ ವರ್ಗವೇ ಇದ್ದು, ಒಂದಲ್ಲ ಒಂದು ರೀತಿಯಲ್ಲಿ ನಿತ್ಯ ಅರಣ್ಯಕ್ಕೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಒಣಗು ಕಚ್ಚಿದಾಗ ತಲೆನೋವು, ಕಣ್ಣು ಕೆಂಪಾಗುವಿಕೆ, ಗಂಟುನೋವು ಕಾಣಿಸಿಕೊಂಡು ಈ ಮಂಗನಕಾಯಿಲೆ ಬರುತ್ತದೆ.
ನೆರೆಯ ಜಿಲ್ಲೆ ಶಿವಮೊಗ್ಗದಲ್ಲಿ ಮಂಗನಕಾಯಿಲೆಯಿಂದ ಸಾವನ್ನಪ್ಪಿದವರಿಗೆ ಸೂಕ್ತ ಪರಿಹಾರವನ್ನು ಒದಗಿಸಿದ್ದು, ಈ ಜಿಲ್ಲೆಯಲ್ಲಿ ಮಾತ್ರ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ ಅನ್ನೋದು ಸ್ಥಳೀಯರ ಆರೋಪವಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದ್ರೆ, ಮಂಗನಕಾಯಿಲೆ ಸೋಂಕು ಪತ್ತೆಗೆ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುವುದು ಕಷ್ಟಕರವಾಗಿದ್ದು, ಸಾರ್ವಜನಿಕರು ಮುಂಜಾಗ್ರತೆ ವಹಿಸುವುದರ ಜೊತೆಗೆ ಆತಂಕ ಬಿಟ್ಟು ಲಸಿಕೆ ಪಡೆದುಕೊಳ್ಳಲು ಮುಂದಾಗಬೇಕು ಎನ್ನುತ್ತಾರೆ.