ಕಾರವಾರ: ಜಿಲ್ಲೆಯಲ್ಲಿ ಕೊರೊನಾ ಚೈನ್ ಬ್ರೇಕ್ ಮಾಡುವುದಕ್ಕೋಸ್ಕರ ಹಗಲಿರುಳು ಮನೆ, ಕುಟುಂಬವನ್ನು ಬಿಟ್ಟು ಬೀದಿ ಬದಿ ಶ್ರಮಿಸುತ್ತಿರುವ 250 ಕ್ಕೂ ಹೆಚ್ಚು ಪೊಲೀಸರಿಗೆ ಸೋಂಕು ತಗುಲಿದೆ. ಇಷ್ಟಾದರೂ ಧೃತಿಗೆಡದೆ ಸಮಾಜದ ಸ್ವಾಸ್ಥ್ಯಕ್ಕಾಗಿ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚು ಪಾಸಿಟಿವಿಟಿ ರೇಟ್ ಇರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪೊಲೀಸರನ್ನೂ ಬಿಟ್ಟಿಲ್ಲ. ಈವರೆಗೆ ಜಿಲ್ಲೆಯಲ್ಲಿ ಸುಮಾರು 251 ಪೊಲೀಸರಿಗೆ ಸೋಂಕು ದೃಢಪಟ್ಟಿದ್ದು, ಅದರಲ್ಲಿ 188 ಸಿಬ್ಬಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
63 ಸಿಬ್ಬಂದಿ ಸದ್ಯ ಹೋಂ ಕ್ವಾರಂಟೈನ್ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಅದೃಷ್ಟವಶಾತ್ ಸೋಂಕಿನಿಂದಾಗಿ ಪೊಲೀಸರಲ್ಲಿ ಯಾವುದೇ ಪ್ರಾಣಾಪಾಯ ಎದುರಾಗಿಲ್ಲ. ಆದರೆ ಲಾಕ್ಡೌನ್ ಪ್ರಾರಂಭವಾದ ನಂತರ ಪೊಲೀಸರು 24 ಗಂಟೆಗಳ ಕಾಲ ರಸ್ತೆಯಲ್ಲಿಯೇ ಜನರ ಓಡಾಟಕ್ಕೆ ಬ್ರೇಕ್ ಹಾಕಲು ಕಾರ್ಯನಿರ್ವಹಿಸಿದ ಪರಿಣಾಮ ಸೋಂಕು ಹೆಚ್ಚಾಗಲು ಕಾರಣವಾಗಿದೆ ಎನ್ನಲಾಗ್ತಿದೆ.
ಲಾಕ್ಡೌನ್ ವೇಳೆ ಜನರ ಓಡಾಟಕ್ಕೆ ಬ್ರೇಕ್ ಹಾಕಲು ಜಿಲ್ಲೆಯಲ್ಲಿ 1803 ಸಿಬ್ಬಂದಿ ಆಸ್ಪತ್ರೆ, ಮಾರುಕಟ್ಟೆ ಸೇರಿದಂತೆ ವಿವಿಧ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಾರಿ ಸೋಂಕು ತಗುಲಿದ್ದರೂ ಪ್ರಾಣಾಪಾಯ ಆಗದೇ ಇರುವುದಕ್ಕೆ ಲಸಿಕೆಯೇ ಮುಖ್ಯ ಕಾರಣ ಎನ್ನಲಾಗಿದೆ. ಈ ವರೆಗೆ 1555 ಪೊಲೀಸ್ ಸಿಬ್ಬಂದಿಗೆ ಲಸಿಕೆಯನ್ನು ಹಾಕಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಡ್ಡಾಯವಾಗಿ ಲಸಿಕೆ ಹಾಕಿಸಲೇಬೇಕು ಎಂದು ಪ್ರತಿ ಠಾಣೆಯ ಅಧಿಕಾರಿಗಳಿಗೆ ಆದೇಶ ಮಾಡಿದ ಪರಿಣಾಮ ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರು. ಅನಾರೋಗ್ಯ, ಬಾಣಂತಿ, ಗರ್ಭಿಣಿಯರು ಹೀಗೆ 248 ಜನ ಪೊಲೀಸರು ಲಸಿಕೆ ಪಡೆದಿಲ್ಲ. 179 ಜನರು ಮೊದಲ ಡೋಸ್ ಪಡೆದಿದ್ದಾರೆ.
ಇಷ್ಟೇ ಅಲ್ಲದೇ ಪೊಲೀಸರ ಆತ್ಮಸ್ಥೈರ್ಯ ತುಂಬಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿ ಠಾಣೆಯಲ್ಲಿ ಹಬೆ ವ್ಯವಸ್ಥೆಯನ್ನು ಸಹ ಮಾಡಿರುವ ಪರಿಣಾಮ ಅನಾಹುತ ಆಗಿಲ್ಲ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಗಲಿರುಳು ಶ್ರಮಿಸುತ್ತಿದ್ದು, ಜನರು ಅರ್ಥ ಮಾಡಿಕೊಂಡು ಅನಾವಶ್ಯಕವಾಗಿ ಓಡಾಡುವುದನ್ನು ನಿಲ್ಲಿಸಬೇಕು ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಸದ್ಯ ಪೊಲೀಸರು ಕೊರೊನಾ ಸೋಂಕಿಗೆ ಹೆಚ್ಚಾಗಿ ತುತ್ತಾಗಬಾರದು ಎಂದು ಎಸ್ ಪಿ ಶಿವಪ್ರಕಾಶ್ ದೇವರಾಜ್ ಪ್ರತಿ ಸಿಬ್ಬಂದಿಯೂ ಕಾರ್ಯನಿರ್ವಹಿಸುವ ವೇಳೆ ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. ಸುರಕ್ಷತೆಗೆ ಹೆಚ್ಚಿನ ಒತ್ತನ್ನು ಕೊಡಬೇಕು ಎಂದು ಸೂಚಿಸಿದ್ದಾರೆ.
ಓದಿ: ಕೋವಿಡ್ ನಂತರ ವೈದ್ಯಕೀಯ ಮೂಲಸೌಕರ್ಯ ಗಮನಾರ್ಹ ಸುಧಾರಣೆ; ಸಚಿವ ಸುಧಾಕರ್