ಭಟ್ಕಳ: ತಾಲೂಕಿನಲ್ಲಿ ಕೊರೊನಾ ಹರಡುವಿಕೆ ಮುಂದುವರೆದಿದ್ದು, ಒಂದೇ ದಿನ 21 ಕೇಸ್ ಪತ್ತೆಯಾಗಿದೆ. ಅಲ್ಲದೇ ಇಬ್ಬರು ಸೋಂಕಿತರಿಂದ ವೈರಸ್ ಹರಡಿರುವುದು ಖಾತರಿಯಾಗಿದ್ದು, ಮೂಲ ಸೋಂಕಿತರ ಪತ್ತೆ ಕಾರ್ಯದಲ್ಲಿ ಜಿಲ್ಲಾ ಹಾಗೂ ತಾಲೂಕಾಡಳಿತ ಕಾರ್ಯೋನ್ಮುಖವಾಗಿದೆ.
ಈ ಹಿಂದೆ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಭಟ್ಕಳದಿಂದ ತೆರಳಿದ್ದ ದಂಪತಿಯಿಂದ ಕುಟುಂಬದ ಯುವತಿಗೆ ಸೋಂಕು ತಗುಲಿದೆ. ಅಲ್ಲದೆ ಒಂದೇ ದಿನ 12 ಪ್ರಕರಣ ಪತ್ತೆಯಾದ ಬಳಿಕ ಇದೀಗ ಮತ್ತೆ 21 ಪ್ರಕರಣ ದೃಢವಾದ್ದರಿಂದ ಜನರು ಆತಂಕಗೊಂಡಿದ್ದಾರೆ.
ತಾಲೂಕಿನಲ್ಲಿ ನಿರಂತರವಾಗಿ ಕೊರೊನಾ ಪ್ರಕರಣ ಪತ್ತೆಯಾಗುತ್ತಿರುವುದರಿಂದ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಬ್ಯಾಂಕ್ಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂಬ ನಾಮಫಲಕ ಹಾಕಲಾಗಿದೆ.
ಈ ಹಿಂದೆ ನಗರ ಗ್ರಾಮೀಣ ಹಾಗೂ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿಯೂ ಸಹ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿ ಠಾಣೆಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು. ಹಾಗೆಯೇ ಠಾಣೆ ಪಕ್ಕದಲ್ಲಿ ಶಾಮಿಯಾನ ಹಾಕಿ ದೂರು ದುಮ್ಮಾನಗಳಿಗೆ ದೂರು ಕೇಂದ್ರ ತೆರೆಯಲಾಗಿತ್ತು.
ಲಾಕ್‌ಡೌನ್ ಮೊದಲ ಹಂತದಲ್ಲಿ ಸಹಾಯಕ ಆಯುಕ್ತರ ಕಚೇರಿಗೂ ಸಹ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಇದರಿಂದ ಕೊರೊನಾ ವಿಪರೀತ ಹರಡದಂತೆ ನಿಯಂತ್ರಿಸಲು ಸಾಧ್ಯವಾಗಿತ್ತಾದರೂ ನಂತರ ದುಬೈ, ಮುಂಬೈ ಹಾಗೂ ಬೇರೆ ಕಡೆಗಳಿಂದ ಬಂದು ಕ್ವಾರಂಟೈನ್ನಲ್ಲಿದ್ದವರಿಂದ ಸೋಂಕು ಹೆಚ್ಚಾಗಿದೆ.