ಕಾರವಾರ: ಒಂದೆಡೆ ವಿಶಾಲವಾದ ಕರಾವಳಿ ತೀರ, ಇನ್ನೊಂದೆಡೆ ಪಶ್ಚಿಮ ಘಟ್ಟಗಳ ಸರಣಿಯನ್ನು ಹೊಂದಿರುವ ವಿಶಿಷ್ಟ ಜಿಲ್ಲೆ ಉತ್ತರಕನ್ನಡ.
ಇಂತಹ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಪ್ರತಿವರ್ಷ ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ ನೆರೆ, ಭೂಕುಸಿತದಂತಹ ಅವಾಂತರಗಳನ್ನು ಸೃಷ್ಟಿಸಿದ್ದು ಕೋಟ್ಯಂತರ ರೂಪಾಯಿ ಹಾನಿಗೂ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿ ಜಿಲ್ಲೆಯಲ್ಲಿ ಸಂಭವನೀಯ ಪ್ರಾಕೃತಿಕ ವಿಕೋಪಗಳ ಕುರಿತು ಮಾಹಿತಿ ನೀಡುವ ವ್ಯವಸ್ಥೆ ಅಳವಡಿಸಲಾಗುತ್ತಿದೆ.
ಕಳೆದ 2019ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದಿದ್ದ ಧಾರಾಕಾರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿದಿದ್ದು ಜಲಾಶಯಗಳು ತುಂಬಿ ಹೊರಬಿಟ್ಟ ಅಪಾರ ಪ್ರಮಾಣದ ನೀರಿನಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಅಲ್ಲದೇ ಏಕಾಏಕಿ ಸೃಷ್ಟಿಯಾದ ನೆರೆ ಅವಾಂತರದಿಂದಾಗಿ ನದಿ ಪಾತ್ರದಲ್ಲಿದ್ದ ನೂರಾರು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು ಜನಜೀವನ ಅಸ್ತವ್ಯಸ್ತಗೊಂಡಿತ್ತು.
2020ರಲ್ಲಿ ಹೆಚ್ಚು ಮಳೆಯಾಗಿದ್ದರೂ ಸಹ ಕೆಲವೆಡೆ ಮಾತ್ರ ನೆರೆ ಉಂಟಾಗಿದ್ದು ಹೆಚ್ಚು ಹಾನಿ ಸಂಭವಿಸಿರಲಿಲ್ಲ. ಆದ್ರೆ ಕಳೆದವರ್ಷ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ವರುಣ ಅಬ್ಬರಿಸಿದ್ದು ನೆರೆಯ ಜೊತೆಗೆ ಜಿಲ್ಲೆಯ ಹಲವೆಡೆ ಭೂಕುಸಿತ ಸಂಭವಿಸಿ ಜನರನ್ನು ಆತಂಕಕ್ಕೀಡು ಮಾಡಿತ್ತು.
ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದ ಸಂದರ್ಭಗಳಲ್ಲಿ ನೆರೆ ಅಥವಾ ಭೂಕುಸಿತ ಉಂಟಾದಾಗ ಜನಜೀವನಕ್ಕೆ ಸಾಕಷ್ಟು ಹಾನಿ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸುವ ಪೂರ್ವದಲ್ಲೇ ಅವುಗಳು ಸಂಭವಿಸುವ ವ್ಯಾಪ್ತಿಯನ್ನ ತಿಳಿದುಕೊಂಡು ಸೂಚನೆ ನೀಡಿದಲ್ಲಿ ಅವುಗಳಿಂದ ಉಂಟಾಗುವ ಹೆಚ್ಚಿನ ಹಾನಿಯನ್ನ ತಪ್ಪಿಸಲು ಸಹಕಾರಿಯಾಗುತ್ತದೆ. ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರ ಯೋಜನೆಯೊಂದನ್ನ ರೂಪಿಸಿದ್ದು ಭಾರತೀಯ ಹವಾಮಾನ ಇಲಾಖೆಯಿಂದ ನೇರವಾಗಿ ವಿಕೋಪಗಳು ಸಂಭವಿಸುವ ಪ್ರದೇಶಗಳಿಗೇ ಮಾಹಿತಿ ನೀಡುವ ತಾಂತ್ರಿಕತೆಯನ್ನ ಅಳವಡಿಸಲು ಜಿಲ್ಲಾಡಳಿತ ಮುಂದಾಗಿದೆ.
ಅರ್ಲಿ ವಾರ್ನಿಂಗ್ ಸಿಸ್ಟಮ್: ಈ ಅರ್ಲಿ ವಾರ್ನಿಂಗ್ ಸಿಸ್ಟಮ್ ಕೇಂದ್ರದ ಹವಾಮಾನ ಇಲಾಖೆ ಸಹಯೋಗದೊಂದಿಗೆ ಕಾರ್ಯನಿರ್ವಹಿಸಲಿದ್ದು ಪ್ರಮುಖ ಸ್ಥಳಗಳಲ್ಲಿ ಸೈರನ್‌ಗಳನ್ನು ಅಳವಡಿಸಲಾಗುತ್ತದೆ. ಸೈಕ್ಲೋನ್, ನೆರೆ ಪ್ರವಾಹ ಸೇರಿದಂತೆ ಪ್ರಾಕೃತಿಕ ವಿಕೋಪಗಳು ಎದುರಾಗುವ ಪೂರ್ವದಲ್ಲಿ ಜಿಲ್ಲಾಡಳಿತದ ಜೊತೆಗೆ ಹಾನಿಗೊಳಗಾಗುವ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಮೈಕ್‌ಗಳ ಮೂಲಕ ನೇರವಾಗಿ ಕೇಂದ್ರ ಹವಾಮಾನ ಇಲಾಖೆಯಿಂದಲೇ ಮುನ್ಸೂಚನೆಯನ್ನ ನೀಡಲಾಗುತ್ತದೆ.
ಜಿಲ್ಲೆ ಗುಡ್ಡಗಾಡು ಪ್ರದೇಶ ಹೊಂದಿದ್ದು ಅಲ್ಲಿ ಇಂತಹ ಅರ್ಲಿ ವಾರ್ನಿಂಗ್ ಟವರ್‌ಗಳನ್ನ ಅಳವಡಿಸುವುದು ಕಷ್ಟ ಎನ್ನಲಾಗಿದೆ. ಆದ್ರೆ ಕರಾವಳಿಯಲ್ಲಿ ಅಳವಡಿಕೆ ಸಾಧ್ಯವಾಗಲಿದ್ದು ಮುಂದಿನ ದಿನಗಳಲ್ಲಿ ಜಲಾಶಯಗಳ ಭರ್ತಿಯಂತಹ ಮುನ್ನೆಚ್ಚರಿಕೆಯನ್ನ ಸಹ ಈ ವ್ಯವಸ್ಥೆ ಮೂಲಕ ನೀಡುವ ಸಾಧ್ಯತೆಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಅಂತಾ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇನ್ನು ಚಂಡಮಾರುತ, ಪ್ರವಾಹದಂತಹ ಪರಿಸ್ಥಿತಿಗಳು ಎದುರಾಗುವ ಪೂರ್ವದಲ್ಲಿಯೇ ಮಾಹಿತಿ ಲಭ್ಯವಾಗುವಂತಾದಲ್ಲಿ ಮುಂದೆ ಸಂಭವಿಸಬಹುದಾದ ಹೆಚ್ಚಿನ ಹಾನಿಯನ್ನ ನಿಯಂತ್ರಿಸುವುದು ಸಾಧ್ಯವಾಗಲಿದ್ದು ಈ ಯೋಜನೆ ಆದಷ್ಟು ಶೀಘ್ರದಲ್ಲಿ ಜಾರಿಯಾಗಲಿ ಅಂತಾ ಸ್ಥಳೀಯರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಗಳ ಕುರಿತು ನೇರವಾಗಿ ಜನರಿಗೇ ಮಾಹಿತಿ ಒದಗಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿರುವುದು ನಿಜಕ್ಕೂ ಶ್ಲಾಘನೀಯ. ಈ ಯೋಜನೆ ಆದಷ್ಟು ಶೀಘ್ರದಲ್ಲಿ ಜಾರಿಯಾದಲ್ಲಿ ನೈಸರ್ಗಿಕ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಜನಜೀವನ ಹಾನಿಯಾಗುವುದನ್ನು ತಡೆಗಟ್ಟಲು ಸಹಕಾರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇದನ್ನೂ ಓದಿ: ನಿಷೇಧಿತ ತಂಬಾಕು ಜಾಹೀರಾತಿಗೆ ಸಾಮಾಜಿಕ ಜಾಲತಾಣ ವೇದಿಕೆ: ಸೇವನೆಯಲ್ಲಿ ಕರ್ನಾಟಕವೇ ನಂಬರ್ 1!