ಶಿರಸಿ: ಶಿಕ್ಷಕರ ಸಮಸ್ಯೆ ಬಗೆಹರಿಸಲು ಅವರ ಒತ್ತಾಸೆಯಂತೆ ಪರಿಷತ್ತಿಗೆ 8 ನೇ ಬಾರಿಗೆ ಸ್ಪರ್ಧಿಸಿದ್ದು, ಶಿಕ್ಷಕರು ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆಯಿದೆ ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು.
ಶಿರಸಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಕರು ಸಮಸ್ಯೆಗಳಿಗೆ ಸಿಲುಕಿದಾಗ ಅವರ ಪರವಾಗಿ ನಿಂತು ಹೋರಾಡಿದ್ದೇನೆ. ಜಾತಿ, ಪಕ್ಷ, ಧರ್ಮಗಳನ್ನು ಪರಿಗಣಿಸದೇ ಬಸವಣ್ಣನವರ ಉಕ್ತಿಯನ್ನು ಅಳವಡಿಸಿಕೊಂಡು ಕಾರ್ಯ ನಿರ್ವಹಿಸಿದ್ದರಿಂದಲೇ ಶಿಕ್ಷಕರು ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು.
ಶಿಕ್ಷಣ ರಂಗವನ್ನು ಸಮಸ್ಯೆ ರಹಿತ ರಂಗವನ್ನಾಗಿಸಲು ಸಾಕಷ್ಟು ಪ್ರಯತ್ನಿಸಿದರೂ, ಹೊಸ ಸಮಸ್ಯೆಗಳು ಸೃಷ್ಟಿಯಾಗುತ್ತಲಿವೆ. ಈ ಸಮಸ್ಯೆಗಳ ಪರಿಹಾರಕ್ಕೆ ಮತ್ತೊಮ್ಮೆ ಸ್ಪರ್ಧಿಸುತ್ತಿದ್ದೇನೆ. ಈ ಬಾರಿಯೂ ಖಂಡಿತ ಶಿಕ್ಷಕರ ಆಶೀರ್ವಾದದಿಂದ ಗೆಲ್ಲುತ್ತೇನೆ ಎಂದು ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
ಭಾರಿ ಅಂತರದಲ್ಲಿ ಗೆಲುವು ಸಾಧಿಸುತ್ತೇವೆ: ಬಿಜೆಪಿ ಮತ್ತು ಹೊರಟ್ಟಿ ಎರಡೂ ಶಕ್ತಿಗಳು ಒಟ್ಟಿಗೆ ಸೇರಿದೆ. ಹೀಗಾಗಿ ಈ ಬಾರಿ ಬಿಜೆಪಿ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಭಾರಿ ಅಂತರದಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ಶಿರಸಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮೊದಲಿನಿಂದಲೀ ನಗಣ್ಯ. ಇಲ್ಲಿ ಬಿಜೆಪಿ ವರ್ಸಸ್ ಹೊರಟ್ಟಿ ಇರುತ್ತಿತ್ತು. ಈ ಬಾರಿ ಎರಡೂ ಶಕ್ತಿ ಒಟ್ಟಿಗೆ ಸೇರಿ ಅತಿದೊಡ್ಡ ಶಕ್ತಿಯಾಗಿ ಹೊರ ಹೊಮ್ಮಿದೆ ಎಂದರು.
ಕಾಂಗ್ರೆಸ್ ಅತೀ ದುರ್ಬಲ ವ್ಯವಸ್ಥೆಯಲ್ಲಿದೆ. ಬಿಜೆಪಿ ಬೂತ್ ಮಟ್ಟದ ಸಂಘಟನೆ ಇದೆ. ಕಾಂಗ್ರೆಸ್ ಸುಮ್ಮನೆ ಒಂದು ಪಕ್ಷವಾಗಿ ಸ್ಪರ್ಧೆ ಮಾಡುತ್ತಿದೆ. ಅಲ್ಲದೇ ಪರಿಷತ್ನ ನಾಲ್ಕೂ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಕರ ಬೆಂಬಲ ಹಾಗೂ ಶ್ರೀರಕ್ಷೆಯೊಂದಿಗೆ 7 ಬಾರಿ ಬಸವರಾಜ ಹೊರಟ್ಟಿ ವಿಧಾನಪರಿಷತ್ಗೆ ಆಯ್ಕೆಯಾಗಿದ್ದಾರೆ. ಕಳೆದ 42 ವರ್ಷಗಳಿಂದ ಶಿಕ್ಷಕರ ಹಾಗೂ ಸಾರ್ವಜನಿಕ ಸೇವೆ ಮಾಡುತ್ತಾ ಬಂದಿದ್ದಾರೆ. ಈ ಹಿಂದೆ ಶಿಕ್ಷಕರಿಗೆ ಅನಾನೂಕೂಲತೆಗಳು ಉಂಟಾದಾಗ ಅವರ ಪರವಾಗಿ ನಿಂತು ಅವರ ಸಮಸ್ಯೆ ಪರಿಹರಿಸುವಲ್ಲಿ ಹೊರಟ್ಟಿ ಅವರು ಬಹಳ ಶ್ರಮ ವಹಿಸಿದ್ದರು. ಈ ಬಾರಿ ಶಿಕ್ಷಕರ ಮತಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ಶಿಕ್ಷಕರು ಹೊರಟ್ಟಿ ಯವರಿಗೆ ಮತನೀಡುವ ಮೂಲಕ ಆರಿಸಿ ತರಬೇಕಾಗಿದೆ ಎಂದರು.
ಇದನ್ನೂ ಓದಿ: ಯಾರ ಬಳಿ ದುಡ್ಡು ಜಾಸ್ತಿ ಇರುತ್ತದೆಯೋ ಅಂತವರು ಆರಿಸಿ ಬರುತ್ತಾರೆ : ಬಸವರಾಜ್ ಹೊರಟ್ಟಿ