ಶಿರಸಿ: ಉಪ ಚುನಾವಣೆ ಹಿನ್ನೆಲೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬನವಾಸಿಯಲ್ಲಿ ಭಾನುವಾರ ಕಾಂಗ್ರೆಸ್ನಿಂದ ಶಕ್ತಿ ಪ್ರದರ್ಶನ ನಡೆಯಿತು. ಬನವಾಸಿ ಪ್ರತ್ಯೇಕ ತಾಲೂಕು ರಚನೆಗೆ ಕಾಂಗ್ರೆಸ್ ಬೆಂಬಲ ಸೂಚಿಸುವ ಜತೆಗೆ ಪಕ್ಷಕ್ಕೆ ಕೈಕೊಟ್ಟ ಶಿವರಾಮ ಹೆಬ್ಬಾರ್ ಅವರಿಗೆ ಸೋಲಿನ ರುಚಿ ತೋರಿಸಲು ಕಾರ್ಯಕರ್ತರಿಗೆ ಸಂದೇಶ ನೀಡಲಾಯಿತು.
ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಉತ್ತರ ಕನ್ನಡದಿಂದ ಬನವಾಸಿ ವಿಭಜನೆಗೆ ವಿರೋಧ, ಬನವಾಸಿ ಪ್ರತ್ಯೇಕ ತಾಲೂಕು ರಚನೆಗೆ ಬೆಂಬಲ, ಅತಿಕ್ರಮಣದಾರರಿಗೆ ಪಟ್ಟಾ ವಿತರಣೆ ಸೇರಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ವಿಚಾರ ಮುಂದಿಟ್ಟು ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ವಿರುದ್ಧ ಜನಾಭಿಪ್ರಾಯ ರೂಪಿಸುವ ಪ್ರಯತ್ನ ನಡೆಯಿತು.
ಶಾಸಕ ಆರ್ ವಿ ದೇಶಪಾಂಡೆ ಸಮಾವೇಶಕ್ಕೆ ಚಾಲನೆ ನೀಡಿ, ಅನರ್ಹ ಶಾಸಕ ಈ ಕ್ಷೇತ್ರದಲ್ಲಿ ಮತ್ತೆ ನಿಂತರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ. 2014ರ ಚುನಾವಣೆಯಲ್ಲಿ 24ಸಾವಿರ ಮತಗಳ ಅಂತರದಿಂದ ಗೆದ್ದ ಹೆಬ್ಬಾರ್, ಕಳೆದ ಚುನಾವಣೆಯಲ್ಲಿ ಕೇವಲ 1400 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ. ಇನ್ನೊಮ್ಮೆ ಸ್ಪರ್ಧಿಸಿದರೆ ಅವರ ಸೋಲು ಖಚಿತ ಎಂದು ಹೇಳಿದರು.
ಬನವಾಸಿಗೆ ಬೆಂಬಲ: ಬನವಾಸಿ ಪ್ರತ್ಯೇಕ ತಾಲೂಕು ರಚನೆಗೆ ಬೆಂಬಲ ಸೂಚಿಸದ ಅವರು, ಬನವಾಸಿ ಉತ್ತರ ಕನ್ನಡದ ಗಂಡು ಮೆಟ್ಟಿದ ನಾಡು. ಇದು ಉತ್ತರ ಕನ್ನಡದ ಭಾಗವಾಗಿಯೇ ಇರಬೇಕು. ಇದನ್ನು ಬೇರೆ ತಾಲೂಕಿಗೆ ಅಥವಾ ಜಿಲ್ಲೆಗೆ ಸೇರಿಸುವುದನ್ನು ಯಾವ ಕಾರಣಕ್ಕೂ ಒಪ್ಪುವುದಿಲ್ಲ. ಒಂದೊಮ್ಮೆ ಅಂತಹ ಕೆಲಸಕ್ಕೆ ಕೈ ಹಾಕಿದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.