ಕಾರವಾರ: ಪರೇಶ್ ಮೆಸ್ತಾ ಪ್ರಕರಣ ಸಿಬಿಐ ಬಿ ರಿಪೋರ್ಟ್ ಹಾಕುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ರಂಗೇರುತ್ತಿದೆ. ಪರೇಶ್ ಮೇಸ್ತಾ ಸಾವು ಸಹಜ ಎಂದಿದ್ದರು ಅನ್ಯಕೋಮಿನವರೇ ಕೊಲೆ ಮಾಡಿದ್ದಾರೆಂದು ಬಿಜೆಪಿ ನಾಯಕರು ಆರೋಪ ಮಾಡಿ ಗಲಭೆಗೆ ಕಾರಣವಾಗಿದ್ದರು. ಇದೀಗ ಜಿಲ್ಲೆಯ ಜನರ ಕ್ಷಮೆಯನ್ನು ಬಿಜೆಪಿ ನಾಯಕರುಗಳು ಕೇಳಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ.
ಹೌದು, ಪರೇಶ್ ಮೇಸ್ತಾ ಸಾವಿನ ಪ್ರಕರಣ ಸಿಬಿಐ ಬಿ ರಿಪೋರ್ಟ್ ಹಾಕಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ 2017 ರಲ್ಲಿ ಕೋಮಗಲಭೆಯಲ್ಲಿ ನಾಪತ್ತೆಯಾಗಿದ್ದ ಪರೇಶ್ ಮೇಸ್ತಾ ಎನ್ನುವ ಮೀನುಗಾರ ಯುವಕ ಎರಡು ದಿನಗಳ ನಂತರ ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದ. ಈ ವೇಳೆ ಬಿಜೆಪಿ ನಾಯಕರುಗಳು ಪರೇಶ್ ಮೇಸ್ತಾನನ್ನ ಕೊಲೆ ಮಾಡಿದ್ದು, ಇದಕ್ಕೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎಂದು ಆರೋಪಿಸಲಾಗಿತ್ತು.
ಬಿಜೆಪಿ ಇನ್ನಾದರೂ ಸುಮ್ಮನಾಗಲಿ: ಇನ್ನು ಅನ್ಯಕೋಮಿನಿಂದಲೇ ಕೊಲೆ ನಡೆದಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಇದೀಗ ಪ್ರಕರಣದ ತನಿಖೆ ನಡೆಸಿದ ಸಿಬಿಐ ಬಿ ರಿಪೋರ್ಟ್ ಹಾಕಿದೆ. ಅದಾಗಿಯೂ ಬಿಜೆಪಿಯ ಕೆಲ ನಾಯಕರು ಮರು ತನಿಖೆ ನಡೆಸಲು ಆಗ್ರಹಿಸುತ್ತಿದ್ದು, ಇದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಿಬಿಐ ಮೇಲೆ ವಿಶ್ವಾಸವಿಲ್ಲ ಎಂದು ಸರ್ಕಾರವೇ ಮರು ತನಿಖೆಗೆ ಆದೇಶ ಮಾಡಲಿ. ಇಲ್ಲದಿದ್ದರೆ ಜನ ಪ್ರತಿನಿಧಿಗಳೇ ಉತ್ತರ ನೀಡಲಿ. ಇಲ್ಲದಿದ್ದರೇ ಕಾಂಗ್ರೆಸ್ ಪರೇಶ್ ಮೇಸ್ತಾ ಕುಟುಂಬದ ಸಹಾಯಕ್ಕೆ ನಿಲ್ಲುತ್ತದೆ. ಜನರಲ್ಲಿ ಗೊಂದಲ ಮೂಡಿಸಿದ್ದ ಬಿಜೆಪಿ ಇನ್ನಾದರೂ ಸುಮ್ಮನಾಗಲಿ, ಜಿಲ್ಲೆಯ ಜನರ ಕ್ಷಮೆ ಕೇಳಲಿ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
ಈಗಲಾದರೂ ಪರಿಹಾರಕೊಡಲಿ: ಇನ್ನು ಪರೇಶ್ ಮೇಸ್ತಾ ಸಾವಿನ ನಂತರ ಜಿಲ್ಲೆಯ ಕುಮಟಾ, ಹೊನ್ನಾವರ, ಕಾರವಾರ, ಶಿರಸಿಯಲ್ಲಿ ಗಲಭೆಗಳಾಗಿದ್ದವು. ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳು ಗಲಭೆಯಲ್ಲಿ ಹಾನಿಯಾಗಿತ್ತು. ಅಂದಿನ ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರ ಕಾರನ್ನ ಸಹ ಸುಟ್ಟು ಹಾಕಲಾಗಿತ್ತು.
ಪರೇಶ್ ಮೇಸ್ತಾನನ್ನ ಅನ್ಯ ಕೋಮಿನವರು ಕೊಲೆ ಮಾಡಿದ್ದಾರೆಂದು ಜನರಲ್ಲಿ ತಲೆಗೆ ತುಂಬಿ ಈ ಗಲಭೆಗೆ ಬಿಜೆಪಿಗರು ಕಾರಣರಾಗಿದ್ದರು ಎಂದು ಕಾಂಗ್ರೆಸ್ ಸದ್ಯ ಆರೋಪಿಸುತ್ತಿದ್ದು, ಬಿಜೆಪಿ ನಾಯಕರು ಶಾಂತಿಯುತ ಜಿಲ್ಲೆಯಲ್ಲಿ ಗಲಭೆ ಎಬ್ಬಿಸಿದ್ದಕ್ಕೆ ಕ್ಷಮೆ ಕೇಳಲಿ. ಅಲ್ಲದೇ ಗಲಭೆಯಿಂದ ಹಲವರ ಆಸ್ತಿ ಪಾಸ್ತಿ ಹಾನಿಯಾಗಿದ್ದು, ಅಂತವರಿಗೆ ಈಗಲಾದರೂ ಪರಿಹಾರಕೊಡಲಿ ಎಂದು ಕೈ ನಾಯಕರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆ: ಕಳೆದ ಬಾರಿ ಪರೇಶ್ ಮೇಸ್ತಾ ಪ್ರಕರಣ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಗೆ ಕಾರಣವಾಗಿತ್ತು. ಕರಾವಳಿಯ ಒಂದು ಕ್ಷೇತ್ರ ಹೊರತು ಪಡಿಸಿ ಉಳಿದೆಲ್ಲ ಕ್ಷೇತ್ರದಲ್ಲಿ ಪ್ರಕರಣದಿಂದ ಸೋಲಿಗೆ ಕಾರಣವಾಗಿತ್ತು. ಸದ್ಯ ಬಿ ರಿಪೋರ್ಟ್ ಅನ್ನು ಅಸ್ತ್ರವಾಗಿಟ್ಟುಕೊಂಡು ಈ ಬಾರಿಯ ಚುನಾವಣೆ ಎದುರಿಸಲು ಕೈ ನಾಯಕರು ಸಜ್ಜಾಗಿದ್ದು, ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.
ಓದಿ: ಕಾನೂನು ಸುವ್ಯವಸ್ಥೆ ಇಲ್ಲದ್ದೂ ಪರೇಶ್ ಮೇಸ್ತಾ ಸಾವಿಗೆ ಕಾರಣ: ಅಶ್ವತ್ಥ ನಾರಾಯಣ