ಕಾರವಾರ: ಬೆಂಗಳೂರಿನ ಕೆ.ಜಿ ಹಳ್ಳಿ ಹಾಗೂ ಡಿ.ಜಿ ಹಳ್ಳಿ ಪ್ರದೇಶದಲ್ಲಿ ವರದಿ ಮಾಡಲು ತೆರಳಿದ್ದ ವರದಿಗಾರರು ಹಾಗೂ ಕ್ಯಾಮೆರಾಮ್ಯಾನ್ ಮೇಲೆ ಗಂಭೀರ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕಾರವಾರದ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿಗಳಿಗೆ ಇಂದು ಮನವಿ ಸಲ್ಲಿಸಲಾಯಿತು.
ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸಾಂಕೇತಿಕ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು, ಹಲ್ಲೆಯನ್ನು ಖಂಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಗಲಭೆಕೋರರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿಯವರ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಹಲವು ಪ್ರಕರಣಗಳಲ್ಲಿ ಮಾಧ್ಯಮದವರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಮಾಧ್ಯಮದವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.