ಶಿರಸಿ: ಯಲ್ಲಾಪುರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಮತದಾರರಿಗೆ ಹಣ ಹಂಚುತ್ತಿದ್ದಾರೆ. ಚುನಾವಣೆಯನ್ನು ತಕ್ಷಣವೇ ತಡೆ ಹಿಡಿಯಬೇಕು ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗಿದೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬದನಗೋಡಿನ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಬಸವರಾಜ ನಂದಿಕೇಶ್ವರಮಠ ಚುನಾವಣೆ ತಡೆ ಹಿಡಿದು, ಬಿಜೆಪಿ ಅಭ್ಯರ್ಥಿ ಹೆಬ್ಬಾರ್ ಹಾಗೂ ಅವರ ಆಪ್ತ ದ್ಯಾಮಣ್ಣ ದೊಡ್ಮನಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಚುನಾವಣಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಬುಧವಾರ ಸಂಜೆ ಬನವಾಸಿಯ ಬೆಳ್ಳನಕೇರಿ ಮತ್ತು ಕುಪ್ಪಗಡ್ಡೆ ರಸ್ತೆಯ ಮಧ್ಯದಲ್ಲಿ ಹೆಬ್ಬಾರ್ ಆಪ್ತ ದ್ಯಾಮಣ್ಣ ದೊಡ್ಮನಿ ಮತದಾರರಿಗೆ ಹಣ ಹಂಚುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಹೆಬ್ಬಾರ್ ಧ್ವನಿಯೂ ಸಹ ಇದೆ. ಅಲ್ಲದೇ ದ್ಯಾಮಣ್ಣ ಅವರ ಕಾರ್ ( ಕೆಎ 31, 4461) ಸಹ ವಿಡಿಯೋದಲ್ಲಿ ದಾಖಲಾಗಿದೆ. ಹೆಬ್ಬಾರ್ ಈ ಚುನಾವಣೆಯಲ್ಲಿ ಹಣ ನೀಡಿ ಮತ ಕೇಳುತ್ತಿರುವುದು ಕಂಡು ಬಂದಿದೆ. ಕಾನೂನು ಬಾಹಿರವಾಗಿ ಆಯ್ಕೆಯಾಗಲು ಯತ್ನಿಸಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಚುನಾವಣೆ ತಡೆ ಹಿಡಿಯಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿಡಿಯೋ ಮಾಡಿದವರ ಹೆಸರು ಹೇಳಿದರೆ ಜೀವಕ್ಕೆ ಅಪಾಯವಿದೆ. ಆದ್ದರಿಂದ ವಿಚಾರಣೆ ವೇಳೆ ನಾನು ಬಹಿರಂಗ ಪಡಿಸಲು ಸಿದ್ಧನಿದ್ದೇನೆ. ಈ ಸಂಬಂಧ ಸಾಕ್ಷ್ಯ ಒದಗಿಸುವೆ ಎಂದು ನಂದಿಕೇಶ್ವರಮಠ ಠಾಣೆಯಲ್ಲಿ ಡಿ.5ರಂದು ದೂರು ದಾಖಲಿಸಿದ್ದಾರೆ.