ಶಿರಸಿ: ಹವಾಮಾನ ಆಧಾರಿತ ಬೆಳೆ ವಿಮೆ ಹಣ ಬಾರದೇ ರೈತರು ಸಂಕಷ್ಟದಲ್ಲಿದ್ದು, ಕೇಂದ್ರ ಸರ್ಕಾರ ನಿಗದಿಪಡಿಸಿದ ಮಾನದಂಡದ ಪ್ರಕಾರ ಅಡಿಕೆ ಬೆಳೆಗಾರರಿಗೆ ಹೆಚ್ಚಿನ ಹಣ ಜಮಾ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಶಿರಸಿ ತಾಲೂಕಿನ ಸಹಕಾರಿ ಸಂಸ್ಥೆಯ ಪ್ರಮುಖರೊಬ್ಬರು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು, ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ.
ತಾಲೂಕಿನ ಬನವಾಸಿಯ ಅಂಡಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಲ್ಲಸರ್ಜನ್ ಪಾಟೀಲ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ರೈತರ ಅಳಲನ್ನು ವಿವರಿಸಿದ್ದಾರೆ. ಅಲ್ಲದೇ, ಪಿಎಂಒ ಇಂಡಿಯಾ(@pmoindia) ಟ್ವೀಟ್ ಖಾತೆಯನ್ನು ಲಗತ್ತಿಸಿ ಪ್ರಧಾನಿಗಳಿಗೆ ರೈತರ ಸಂಕಷ್ಟ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ.
ಸಂಘದ ಅಡಿಯಲ್ಲಿ ಬರುವ ಸುಮಾರು 300 ರೈತರಿಗೆ ಬೆಳೆ ವಿಮೆ ಹಣ ಸರಿಯಾದ ಮಾನದಂಡದ ಪ್ರಕಾರ ಜಮಾ ಆಗಿಲ್ಲ. ಒಂದು ಎಕರೆಗೆ 15 ಸಾವಿರ ನೀಡುತ್ತೇವೆ ಎಂದು ಹೇಳಿದ್ದರೂ ಕೇವಲ 5 ಸಾವಿರ ರೂ. ಮಾತ್ರ ನೀಡಿದ್ದಾರೆ. ಇದು ಸಮಂಜಲ್ಲವಲ್ಲ ಎಂದು ಟ್ವೀಟ್ ಮೂಲಕ ಪ್ರಧಾನಿಗೆ ತಿಳಿಸಿದ್ದಾರೆ.
ಅಷ್ಟೇಅಲ್ಲದೆ, ಪ್ರಧಾನಿಗೆ ಪತ್ರವನ್ನೂ ಬರೆದಿರುವ ಮಲ್ಲಸರ್ಜನ್, 2017-18ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಅಡಿಕೆಗೆ ಒಂದು ಹೆಕ್ಟೇರ್ ಗೆ 38,381 ಬರಬೇಕಾಗಿದ್ದು, ಕೇವಲ 13,330 ರೂ. ಮಾತ್ರ ಬಂದಿದೆ. ಆದರೆ 2017-18 ನೇ ಸಾಲಿನ ಒಟ್ಟು ಕ್ಷೇತ್ರ 837.34.02 ಎಕರೆಯಿದ್ದು, ರೈತರ ವಿಮೆಯನ್ನು 538.10.00 ಎಕರೆಗೆ ಇಳಿಸಲಾಗಿದೆ. ಆದ ಕಾರಣ ಅಂಡಗಿ ಗ್ರಾಮ ಪಂಚಾಯತ್ಗೆಕೆ ಯಾವುದೇ ಕಾರಣಕ್ಕೂ ಕಡಿತ ಅಂಶ ಲಾಗೂ ಮಾಡಲು ಆಗುವುದಿಲ್ಲ. ಇದರಿಂದ 300ಕ್ಕೂ ಅಧಿಕ ಕುಟುಂಬಗಳಿಗೆ ಈಗ ಆಗಿರುವ ಅನ್ಯಾಯವನ್ನು ತಾವು ಸರಿಪಡಿಸಿಕೊಡಬೇಕು ಎಂದು ವಿನಂತಿಸಿಕೊಂಡಿದ್ದಾರೆ. ಇನ್ನೂ ಈ ಕುರಿತು ಡಿಸಿ, ತೋಟಗಾರಿಕಾ ಡಿಡಿ, ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ ಎಂದು ಉಲ್ಲೇಖಿಸಿದ್ದಾರೆ.