ಕಾರವಾರ: ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿದ್ದು ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಬಿಜೆಪಿ ಚುನಾವಣಾ ತಯಾರಿ ನಡೆಸಿದ್ದು, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ 20ಕ್ಕೂ ಹೆಚ್ಚು ಕೇಂದ್ರ ಹಾಗೂ ರಾಜ್ಯ ಸಚಿವರು ಆಗಮಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಇದು ಚುನಾವಣಾ ಪೂರ್ವ ಸಿದ್ಧತೆ ಎಂದೇ ಭಾವಿಸಲಾಗುತ್ತಿದೆ.
20ಕ್ಕೂ ಹೆಚ್ಚು ಸಚಿವರಿಗೆ ಆಹ್ವಾನ: ಹೌದು. ವಿಧಾನಸಭಾ ಚುನಾವಣೆಗೆ ಇನ್ನೇನು ಮೂರ್ನಾಲ್ಕು ತಿಂಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಎಲ್ಲ ಪಕ್ಷಗಳು ಚುನಾವಣಾ ಅಖಾಡಕ್ಕೆ ಧುಮುಕಿದ್ದು, ತಮ್ಮದೆಯಾದ ಕಾರ್ಯಕ್ರಮಗಳ ಮೂಲಕ ಚುನಾವಣಾ ತಾಲೀಮು ನಡೆಸಿವೆ. ಅದರಂತೆ ಉತ್ತರ ಕನ್ನಡದಲ್ಲಿಯೂ ಬಿಜೆಪಿ ಚುನಾವಣಾ ಪೂರ್ವ ತಯಾರಿ ನಡೆಸಿದ್ದು ಚುನಾವಣೆ ಪೂರ್ವ ತಯಾರಿ ಎಂಬಂತೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ 20ಕ್ಕೂ ಹೆಚ್ಚು ಕೇಂದ್ರ ಹಾಗೂ ರಾಜ್ಯ ಸಚಿವರನ್ನು ಆಹ್ವಾನಿಸಿದೆ.
ಅಭಿನಂದನಾ ಸಮಾರಂಭ: ಅಲ್ಲದೇ ಕಾರ್ಯಕ್ರಮದಲ್ಲಿ 270 ಕೋಟಿ ರೂ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಮುಂದಾಗಿದೆ. ಜೊತೆಗೆ 30 ವರ್ಷಗಳ ಕಾಲ ಶಾಸಕರಾಗಿ ಹಲವು ಬಾರಿ ಸಚಿವರಾಗಿ ಇದೀಗ ವಿಧಾನಸಭಾಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅಭಿನಂದನಾ ಸಮಾರಂಭವನ್ನು ನಾಳೆ (ಜ.15ರಂದು) ಶಿರಸಿಯಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿಎಂ ಆಗಮನ ಹಿನ್ನೆಲೆ ಪಾರ್ಕಿಂಗ್, ಕಾರ್ಯಕ್ರಮ ಆಯೋಜನೆ ಬಗ್ಗೆ ಪೂರ್ವಭಾವಿ ಸಭೆ ನಡೆಸಿದ್ದು 12 ಗಂಟೆವರೆಗೂ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಳಿಕ ಸಂಜೆವರೆಗೂ ಸಭಾಧ್ಯಕ್ಷರ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ ನೀಡಿದ್ದಾರೆ.
ಪ್ರತಿಭಟನೆ ನಡೆಸಲು ಸಜ್ಜು: ಇನ್ನು ಸಿಎಂ ಜಿಲ್ಲೆಗೆ ಆಗಮಿಸುತ್ತಿರುವ ಬೆನ್ನಲ್ಲೆ ಜಿಲ್ಲೆಯ ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿರುವ ಅರಣ್ಯ ಅತಿಕ್ರಮಣದಾರರಿಗೆ ಪಟ್ಟಾ ನೀಡುವ ಸಂಬಂಧ ಅರಣ್ಯ ಹಕ್ಕು ಹೋರಾಟ ಸಮಿತಿಯೂ ಕಪ್ಪು ಪಟ್ಟಿ ಕಟ್ಟಿಕೊಂಡು ಶಿರಸಿಯ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲು ಸಜ್ಜಾಗಿದೆ. ಪ್ರತಿ ಸರ್ಕಾರಗಳು ಕಳೆದ 30 ವರ್ಷದಿಂದ ಅರಣ್ಯ ಅತಿಕ್ರಮಣದಾರರಿಗೆ ಸುಳ್ಳು ಭರವಸೆ ನೀಡಿ ವಂಚನೆ ಮಾಡುತ್ತಿದ್ದು, ಇದರಿಂದ 69 ಸಾವಿರಕ್ಕೂ ಹೆಚ್ಚು ಕುಟುಂಬಗಳು ಪಟ್ಟಾ ಸಿಗದೆ ತೊಂದರೆ ಅನುಭವಿಸುತ್ತಿವೆ.
ಮುಖ್ಯಮಂತ್ರಿ ಜಿಲ್ಲೆಗೆ ಭೇಟಿ ನೀಡಿದ ವೇಳೆ ಅರಣ್ಯ ಅತಿಕ್ರಮಣದಾರರ ಪರ ಸುಪ್ರೀಂಕೋರ್ಟ್ ನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸುವ ಬಗ್ಗೆ 1978ರ ಪೂರ್ವದಲ್ಲಿ ಕೇಂದ್ರ ಸರ್ಕಾರದಿಂದ ಮಂಜೂರಿಗೆ ಶಿಫಾರಸ್ಸು ಮಾಡಿರುವ 2,513 ಕುಟುಂಬಳಿಗೆ ಹಕ್ಕು ಪತ್ರ ನೀಡುವುದು, ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯಿಂದ ಹೆಚ್ಚುವರಿ ಅರಣ್ಯ ಪ್ರದೇಶ ಸೇರಿಸಿರುವುದನ್ನು ಹಿಂಪಡೆಯಬೇಕು ಎಂದು ಮನವಿ ಸಲ್ಲಿಸಲಾಗುವುದು. ನಮ್ಮ ಸಮಸ್ಯೆ ಆಲಿಸಿ ಬಗೆಹರಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
ಒಟ್ಟಾರೆ ಚುನಾವಣೆ ಸಮೀಪಿಸುತ್ತಿರುವಂತೆ ಮುಖ್ಯಮಂತ್ರಿ ಹಾಗೂ ಸಚಿವರ ದಂಡೇ ಜಿಲ್ಲೆಗೆ ಆಗಮಿಸುತ್ತಿದ್ದು ಇದು ಬಿಜೆಪಿಯ ಚುನಾವಣಾ ಪ್ರಚಾರದ ರಣಕಹಳೆ ಎಂದೇ ಹೇಳಲಾಗುತ್ತಿದೆ.
ಪ್ರತ್ಯೇಕ ಜಿಲ್ಲೆ ರಚನೆಗೆ ಸಕಾರಾತ್ಮಕ ಸ್ಪಂದನೆ: ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯಲ್ಲಿ ಶಿರಸಿ ಪ್ರತ್ಯೇಕ ಜಿಲ್ಲೆ ಕುರಿತು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇತ್ತೀಚೆಗೆ ಮಾತನಾಡಿದ್ದರು. ಜಿಲ್ಲೆಯ ರಚನೆಯ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶಿರಸಿಯಲ್ಲಿ ನಡೆದ ಕಾರ್ಮಿಕ ಇಲಾಖೆ ರಾಜ್ಯ ವಿಮಾ ಯೋಜನೆ ಚಿಕಿತ್ಸಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ರಾಜ್ಯದ ವಿವಿಧ ಜಿಲ್ಲೆ ವಿಭಜಿಸಿ ಪ್ರತ್ಯೇಕ ಜಿಲ್ಲೆ ರಚನೆಯಾಗಿದೆ. ಘಟ್ಟದ ಮೇಲಿನ ತಾಲೂಕುಗಳನ್ನು ಒಳಗೊಂಡ ಶಿರಸಿ ಪ್ರತ್ಯೇಕ ಜಿಲ್ಲೆಯ ಬೇಡಿಕೆಗೆ ಬಲ ಬರುತ್ತಿದೆ. ಈ ಬಗ್ಗೆ ಸಾರ್ವಜನಿಕರು ನನ್ನ ಹಾಗೂ ಸಚಿವ ಶಿವರಾಮ ಹೆಬ್ಬಾರ ಅವರನ್ನು ಕೇಳುತ್ತಿದ್ದಾರೆ ಎಂದು ಹೇಳಿದ್ದರು.
ಪ್ರತ್ಯೇಕ ಜಿಲ್ಲೆ ಬೇಡಿಕೆ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಬಳಿ ಚರ್ಚಿಸಲಾಗಿದೆ. ಪ್ರತ್ಯೇಕ ಜಿಲ್ಲೆಯಾಗಲು ಸಚಿವ ಹೆಬ್ಬಾರ ಅವರ ಸಹಕಾರವೂ ಮುಖ್ಯ. ಈ ಬಗ್ಗೆ ಮತ್ತೊಮ್ಮೆ ಮುಖ್ಯಮಂತ್ರಿ ಅವರಲ್ಲಿ ಇಬ್ಬರೂ ಚರ್ಚಿಸುತ್ತೇವೆ. ಸಮಯ, ಸಂದರ್ಭ ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಇದೇ ವೇಳೆ ಭರವಸೆಯನ್ನೂ ನೀಡಿದ್ದರು.
ಇದನ್ನೂ ಓದಿ: ಶಿರಸಿ ಪ್ರತ್ಯೇಕ ಜಿಲ್ಲೆ ರಚನೆ: ಕಾಗೇರಿಯಿಂದ ಸಕಾರಾತ್ಮಕ ಸ್ಪಂದನೆ