ಭಟ್ಕಳ: ಪುರಸಭಾ ವ್ಯಾಪ್ತಿಯಲ್ಲಿ ಹೆದ್ದಾರಿ ಅಕ್ಕ ಪಕ್ಕ ಅನಧಿಕೃತವಾಗಿ ಸಾಕಷ್ಟು ಬೀದಿ ಬದಿ ವ್ಯಾಪಾರಿಗಳು ಜೀವನೋಪಾಯಕ್ಕಾಗಿ ಅಂಗಡಿ, ಶೆಡ್ ಕಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದು ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆ ಪುರಸಭೆ ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ಅಂಗಡಿಗಳ ತೆರವು ಕಾರ್ಯ ನಡೆಸಲಾಯಿತು.
ಲಾಕ್ಡೌನ್ ಬಳಿಕ ಎಲ್ಲೆಡೆ ಬಂದ್ ಆಗಿದ್ದ ವಾರದ ಸಂತೆಯ ಹಿನ್ನೆಲೆ ತರಕಾರಿ, ಹಣ್ಣು ಸಹಿತ ಇನ್ನಿತರ ವಸ್ತುಗಳನ್ನು ಮಾರುವ ಬೀದಿ ಬದಿ ವ್ಯಾಪಾರಿಗಳು ಜೀವನ ನಡೆಸಲು ರಾಷ್ಟ್ರೀಯ ಹೆದ್ದಾರಿಯ ಅಕ್ಕ ಪಕ್ಕದಲ್ಲಿ ಶೆಡ್, ಗೂಡಂಗಡಿಗಳನ್ನು ಹಾಕಿಕೊಂಡಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ಅಂಗಡಿಗಳ ತೆರವಿಗೆ ಪುರಸಭೆಗೆ ದೂರು ಬಂದ ಹಿನ್ನೆಲೆ ಇಂದು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದರು.
ಪುರಸಭಾ ಮುಖ್ಯಾಧಿಕಾರಿ ದೇವರಾಜ್, ಆರೋಗ್ಯ ನಿರೀಕ್ಷಕಿ ಸೋಜಿಯಾ ಸೋಮನ್ ಹಾಗೂ ಸಿಬ್ಬಂದಿ ಜಾಲಿ ಕಾಸ್ನಿಂದ ಸಂಶುದ್ದೀನ್ ಸರ್ಕಲ್ ವರೆಗೆ ಇರುವ ಎಲ್ಲ ಬೀದಿ ಬದಿ ಅಂಗಡಿಯನ್ನು ತೆರವು ಮಾಡಿಸಿದ್ದಾರೆ. ಈ ಮಧ್ಯೆ ಕೆಲವೊಂದು ಕಡೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಅಧಿಕಾರಿಗಳಿಗೆ ತೆರವು ಮಾಡುವುದಾದರೆ ಎಲ್ಲ ಅಂಗಡಿಯನ್ನು ಮಾಡಿ ಒಬ್ಬರಿಗೊಂದು ಒಬ್ಬರಿಗೊಂದು ಮಾಡಬಾರದು ಎಂದು ವಾಗ್ವಾದಕ್ಕಿಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಹೆದ್ದಾರಿಯ ಅಕ್ಕಪಕ್ಕ ಯಾವುದೇ ಅಂಗಡಿ ಹಾಕಬಾರದು. ಇದರಿಂದ ಸಾರ್ವಜನಿಕರಿಗೆ ವಾಹನ ಓಡಾಟಕ್ಕೆ ಸಮಸ್ಯೆಯಾಗಲಿದೆ. ಎಲ್ಲ ಅಂಗಡಿಯ ತೆರವಿಗೆ ಬಂದಿದ್ದು, ಯಾವೊಬ್ಬರ ಅಂಗಡಿಯನ್ನು ಹಾಗೇ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಈ ಬಗ್ಗೆ ಮಾತನಾಡಿದ ಪುರಸಭಾ ಮುಖ್ಯಾಧಿಕಾರಿ ದೇವರಾಜ, ಈಗಾಗಲೇ ಪುರಸಭೆ ಸಿಬ್ಬಂದಿ ಮೌಖಿಕವಾಗಿ ಅನಧಿಕೃತ ಅಂಗಡಿ ನಿರ್ಮಿಸಿಕೊಂಡಿದ್ದ ವ್ಯಾಪಾರಿಗಳಿಗೆ ಅಂಗಡಿ ತೆರವಿಗೆ ಸೂಚನೆ ನೀಡಲಾಗಿದ್ದು, ಇದರಲ್ಲಿ ಕೆಲವೊಬ್ಬರು ಅಂಗಡಿ ತೆರವು ಮಾಡಿದ್ದು ಬಹುತೇಕರು ತೆರವಿಗೆ ಮುಂದಾಗದ ಹಿನ್ನೆಲೆ ಇಂದು ಕಾರ್ಯಾಚರಣೆಗಿಳಿದು ತೆರವು ಮಾಡಿಸಿದ್ದೇವೆ. ಕಳೆದ ವಾರದಿಂದ ವಾರದ ಸಂತೆ ಸಹ ಆರಂಭವಾಗಿದ್ದು, ಬೀದಿ ಬದಿ ವ್ಯಾಪಾರಿಗಳು ಅಲ್ಲಿಗೆ ತೆರಳಿ ವ್ಯಾಪಾರ ಮಾಡಬಹುದಾಗಿದೆ ಎಂದರು