ಶಿರಸಿ: ತಾಲೂಕಿನ ಹತ್ತಾರು ಕೆರೆಗಳನ್ನು ಸ್ವಚ್ಛಗೊಳಿಸಿ ಜಲಮೂಲ ಉಳಿವಿಗಾಗಿ ಹೋರಾಟ ನಡೆಸುತ್ತಿರುವ 'ಶಿರಸಿ ಜೀವಜಲ ಕಾರ್ಯಪಡೆ' ಈಗ ಮತ್ತೊಂದು ಸಾಮಾಜಿಕ ಕೆಲಸಕ್ಕೆ ಮುಂದಾಗಿದ್ದು, ಶಿರಸಿ ಪಟ್ಟಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಸನ್ನದ್ಧವಾಗಿದೆ.
ಶಿರಸಿ ಜೀವಜಲ ಕಾರ್ಯಪಡೆ ವತಿಯಿಂದ ಆನೆಹೊಂಡ, ರಾಯರಕೆರೆ, ಬೆಳ್ಳಕ್ಕಿ ಕೆರೆ ಸೇರಿದಂತೆ ಹತ್ತಾರು ಕೆರೆಗಳ ಅಭಿವೃದ್ಧಿ ಮಾಡಲಾಗಿತ್ತು. ಈಗ ಈ ಕಾರ್ಯಪಡೆಯು ಶಿರಸಿಯನ್ನು ಸ್ವಚ್ಛತೆಯಲ್ಲಿ ಮಾದರಿ ಪಟ್ಟಣವಾಗಿ ಮಾಡಲು ಮುಂದಾಗಿದೆ. ಪಟ್ಟಣದ ಹೊರವಲಯದಲ್ಲಿನ ಚಿಪಗಿ ರಸ್ತೆ ಬದಿ ಬಿದಿದ್ದ ತ್ಯಾಜ್ಯ ತೆರವು ಕಾರ್ಯಚರಣೆಯು ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದೆ.
ಚಿಪಗಿ ಮತ್ತು ಬನವಾಸಿ ರಸ್ತೆಗಳಲ್ಲಿ ದಾರಿಹೋಕರು ಮದ್ಯ, ಪ್ಲಾಸ್ಟಿಕ್ ವಾಟರ್ ಬಾಟಲಿ, ಪ್ಲಾಸ್ಟಿಕ್ ಚೀಲ, ಮನೆ ಕಸ ಸೇರಿದಂತೆ ಟನ್ ಗಟ್ಟಲೆ ತ್ಯಾಜ್ಯ ಎಸೆದಿದ್ದರು. ವಾಯುವಿಹಾರಕ್ಕೆ ಬರುತ್ತಿದ್ದ ಸಾರ್ವಜನಿಕರು ತ್ಯಾಜ್ಯದ ವಾಸನೆ ಅಡ್ಡಿಪಡಿಸುತ್ತಿತ್ತು. ಇದನ್ನು ಗಮನಿಸಿದ ಕಾರ್ಯಪಡೆ ಕಸವನ್ನು ತೆರವುಗೊಳಿಸಿದ್ದಾರೆ.
ರಸ್ತೆಗಳ ಬಿದಿದ್ದ ಕಸದ ರಾಶಿಯನ್ನು ಹಿಟಾಚಿ ಮೂಲಕ ತೆಗೆದು ತ್ಯಾಜ್ಯ ಸಂಗ್ರಹಣ ಘಟಕಕ್ಕೆ ಸಾಗಿಸಿದ್ದೇವೆ. ಚರಂಡಿಯಲ್ಲಿ ತುಂಬಿದ್ದ ಕಸವನ್ನು ಕೂಲಿಕಾರರಿಂದ ತೆರವುಗೊಳಿಸಿದ್ದೇವೆ. ಇಲ್ಲಿ ಕಸ ಹಾಕದಂತೆ ಸಾರ್ವಜನಿಕರಿಗೆ ಸ್ವಚ್ಛತೆಯ ಮಹತ್ವ ತಿಳಿಸುತ್ತಿದ್ದೇವೆ ಎಂದು ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹೇಳಿದರು.
ಒಂದು ಸ್ವಚ್ಛತೆ ಕಾರ್ಯಾಚರಣೆ ನಡೆಯುತ್ತಿದ್ದರೇ ಮತ್ತೊಂದು ಕಡೆ ಸಾರ್ವಜನಿಕರು ಕಸವನ್ನು ಎಸೆಯುತ್ತಿದ್ದರು. ಬೆಳಿಗೆಯಿಂದ ಸ್ವಚ್ಛ ಮಾಡಿದ ಜಾಗದಲ್ಲಿ ಮಾಂಸದ ತುಂಡು, ಮದ್ಯದ ಬಾಟಲಿಗಳು ಬಿದ್ದಿವೆ. ಸಾರ್ವಜನಿಕರು ಸ್ವಚ್ಛತೆಯ ಕಡೆ ಗಮನಹರಿಸಬೇಕು ಎಂದು ಸ್ಥಳೀಯ ನಿವಾಸಿ ಜೀವನ್ ಪೈ ಮನವಿ ಮಾಡಿದರು.