ಕಾರವಾರ: ತೋಟದ ಬಾವಿಯಲ್ಲಿ ಆಯತಪ್ಪಿ ಬಿದ್ದು ಮಗುವೊಂದು ಮೃತಪಟ್ಟ ಧಾರುಣ ಘಟನೆ ಹೊನ್ನಾವರ ತಾಲೂಕಿನ ಕಡ್ಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಂದೂರಿನಲ್ಲಿ ನಡೆದಿದೆ. ವಂದೂರಿನ ನಾಗಭೂಷಣ ದಯಾನಂದ ಹೆಗಡೆ ಎನ್ನುವವರ ಒಂದನೇ ತರಗತಿ ವಿದ್ಯಾರ್ಥಿ ಮೃತ ಬಾಲಕ ಎಂದು ತಿಳಿದುಬಂದಿದೆ. ತಮ್ಮ ಮನೆಯ ತೋಟದ ಸಮೀಪ ನಾಯಿಯೊಂದಿಗೆ ಆಟ ಆಡುತ್ತಾ ತೆರಳಿ ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದಿದ್ದಾನೆ. ಬಾಲಕನನ್ನು ಕುಟುಂಬದವರು ತೋಟದಲ್ಲಿ ಹುಡುಕಿ ಬಾವಿಯ ಕಡೆ ನೋಡಿದಾಗ ಸಾವನ್ನಪ್ಪಿರುವುದು ಗೊತ್ತಾಗಿದೆ.
ತೆರೆದ ಬಾವಿಯಾಗಿದ್ದು, ಬಾವಿಯಲ್ಲಿ ನೀರು ಇದ್ದ ಪರಿಣಾಮ ಬಾಲಕ ಮುಳುಗಿ ಮೃತಪಟ್ಟಿದ್ದಾನೆ. ಸ್ಥಳಕ್ಕಾಗಮಿಸಿದ ಹೊನ್ನಾವರ ಪಿಎಸ್ಐ ಪ್ರವೀಣ್ ಕುಮಾರ್ ನೇತೃತ್ವದ ಸಿಬ್ಬಂದಿ ಪರಿಶೀಲನೆ ನಡೆಸಿದ ಬಳಿಕ ಬಾವಿಯಿಂದ ಮೃತದೇಹ ಮೇಲಕ್ಕೆ ಎತ್ತಿದ್ದಾರೆ. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಜೆಡಿಎಸ್ ಮುಖಂಡನೆಂದು ಹೇಳಿ ವಂಚಿಸಿದ ಆರೋಪ: ಮನೆಗೆ ನುಗ್ಗಿ ಧರ್ಮದೇಟು ಕೊಟ್ಟ ಮಹಿಳೆ
ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಮೃತ (ದಕ್ಷಿಣ ಕನ್ನಡ): ಈಜಲು ನದಿಗಿಳಿದ ಇಬ್ಬರು ಯುವಕರು ಮುಳುಗಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ದೊಡ್ಡೇರಿ ಸಮೀಪದ ಪಯಸ್ವಿನಿ ನದಿಯಲ್ಲಿ ಶನಿವಾರ ನಡೆದಿತ್ತು. ಪುತ್ತೂರು ತಾಲೂಕಿನ ಕೌಡಿಚ್ಚಾರು ಸಮೀಪದ ಅರಿಯಡ್ಕದ ದೇರ್ಲ ನಾರಾಯಣ ಪಾಟಾಳಿ ಅವರ ಪುತ್ರ ಜಿತೇಶ್ (19) ಹಾಗೂ ಪಡುವನ್ನೂರು ಗ್ರಾಮದ ಅಂಬಟೆಮೂಲೆಯ ಕೃಷ್ಣ ನಾಯ್ಕ ಎಂಬುವವರ ಪುತ್ರ ಪ್ರವೀಣ್ (19) ಮೃತ ಯುವಕರು ಎಂಬುದು ತಿಳಿದುಬಂದಿದೆ.
ಶನಿವಾರ ಪುತ್ತೂರಿನ ಕೌಡಿಚ್ಚಾರ್ ಸುತ್ತಮುತ್ತಲ 8 ಮಂದಿ ಯುವಕರು ಜತೆಯಾಗಿ ಸುಳ್ಯದ ಪಯಸ್ವಿನಿ ನದಿಗೆ ಈಜಲು ಬಂದಿದ್ದರು. ಯುವಕರಲ್ಲಿ ಓರ್ವ ನೀರಿಗಿಳಿದಿದ್ದ. ಆತ ಇಳಿದ ಸ್ಥಳ ಪ್ರಪಾತವಾಗಿದ್ದರಿಂದ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ಗಮನಿಸಿದ ಮತ್ತೋರ್ವ ಆತನನ್ನು ರಕ್ಷಿಸಲು ಹೋಗಿ ನೀರು ಪಾಲಾಗಿದ್ದಾನೆ ಎನ್ನಲಾಗ್ತಿದೆ.
ಇದನ್ನೂ ಓದಿ : ಪತ್ನಿ ಮೇಲೆ ಅನೈತಿಕ ಸಂಬಂಧ ಶಂಕೆ: ಹೆತ್ತ ಮಕ್ಕಳನ್ನು ಕತ್ತು ಹಿಸುಕಿ ಕೊಂದ ಪಾಪಿ ತಂದೆ
ಸುಳ್ಯದ ಓಡಬಾಯಿ ಬಳಿಯ ತೂಗು ಸೇತುವೆ ಸಮೀಪ ಕಾರನ್ನು ನಿಲ್ಲಿಸಿದ ಯುವಕರು ಸೇತುವೆಯಲ್ಲಿ ನಡೆದು ದೊಡ್ಡೇರಿಯ ಸಂಬಂಧಿಕರ ಮನೆಗೆ ಹೋಗಿ ಬಂದು ಬಳಿಕ ಪಯಸ್ವಿನಿ ನದಿಗೆ ಇಳಿದಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸ್ಥಳೀಯ ಈಜುಗಾರರು ಯುವಕರ ಶವಗಳನ್ನು ಮೇಲೆತ್ತಿದ್ದಾರೆ.
ಯುವಕರು ಹುಲ್ಲು ತೆಗೆಯುವ ಕೆಲಸ ಮಾಡುತ್ತಿದ್ದರು. ಶನಿವಾರ ಪುತ್ತೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮ ಇದ್ದ ಕಾರಣ ರಜೆ ಮಾಡಿ ಸುತ್ತಾಡಲು ಹೊರಟಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಪುತ್ತೂರು : ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು