ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಿಮಾನಿ ಗ್ರಾಮದಲ್ಲಿ ಚಿರತೆ ಕಾಟ ಹೆಚ್ಚಾಗಿತ್ತು. ಮನೆಗಳಲ್ಲಿ ಸಾಕಿದ್ದ ನಾಯಿಗಳು, ದನಕರುಗಳು ನಾಪತ್ತೆಯಾಗತೊಡಗಿದ್ದವು. ಆದರೆ, ನಿನ್ನೆ ಮನೆಯೊಂದರ ಬಳಿ ಇದ್ದ ನಾಯಿಯನ್ನು ಹೊತ್ತೊಯ್ಯಲು ಬಂದಿದ್ದ ಆ ಕಳ್ಳ ಚಿರತೆ ಕೊನೆಗೂ ಸೆರೆಯಾಗಿದೆ.
ಚಿರತೆ ಸೆರೆಗೆ ವಿಷ್ಣು ಹರಿಕಂತ್ರ ಮಾಡಿದ್ದೇನು?
ಗ್ರಾಮದ ವಿಷ್ಣು ಹರಿಕಂತ್ರ ಎಂಬವರ ಮನೆ ಅಂಗಳಕ್ಕೆ ನಿನ್ನೆ ಬೆಳಗ್ಗೆ 3.30ರ ವೇಳೆಗೆ ಚಿರತೆಯೊಂದು ಆಗಮಿಸಿತ್ತು. ಮನೆಯ ಅಂಗಳದಲ್ಲಿ ಇಟ್ಟಿದ್ದ ನಾಯಿ ಬೋನಿನಲ್ಲಿ ನಾಯಿಯೊಂದು ಮರಿಯನ್ನು ಹಾಕಿದ್ದು ಮರಿಯನ್ನು ಹೊತ್ತೊಯ್ಯಲು ಚಿರತೆ ಮೆಲ್ಲಗೆ ಹೊಂಚು ಹಾಕುತ್ತಿತ್ತು. ಚಿರತೆ ಬಂದ ತಕ್ಷಣ ನಾಯಿ ಬೊಗಳುವ ಶಬ್ದ ಕೇಳಿ ಮನೆಯ ಮಾಲೀಕ ವಿಷ್ಣು ಹರಿಕಂತ್ರ ಬೋನಿನ ಬಳಿ ಬಂದು ನೋಡಿದಾಗ, ಚಿರತೆ ನಾಯಿ ಬೋನಿನ ಒಳಗೆ ಹೋಗುವುದನ್ನು ಗಮನಿಸಿದ್ದಾರೆ. ತಕ್ಷಣ ಬಂದು ಬೋನಿನ ಬಾಗಿಲನ್ನು ಹಾಕಿ ಅಡ್ಡಲಾಗಿ ರಾಡನ್ನು ಇಟ್ಟಿದ್ದಾರೆ. ಗ್ರಾಮಸ್ಥರ ಭೀತಿಗೆ ಕಾರಣವಾಗಿದ್ದ ಚಿರತೆ ಕೊನೆಗೂ ಸೆರೆಯಾಗಿದೆ.
ಗ್ರಾಮಸ್ಥರ ಭೀತಿಗೆ ಕಾರಣವಾಗಿತ್ತು ಚಿರತೆ:
ಗ್ರಾಮದಲ್ಲಿ ಕೆಲ ದಿನಗಳಿಂದ ರಾತ್ರಿ ವೇಳೆ ಚಿರತೆ ಆಗಮಿಸಿ ನಾಯಿಗಳನ್ನು ಹಿಡಿದು ಕಾಡಿನತ್ತ ಸಾಗುತ್ತಿತ್ತು. ಇತ್ತೀಚೆಗೆ ದನಕರುಗಳು ಚಿರತೆ ದಾಳಿಗೆ ಬಲಿಯಾಗಿವೆ. ಇದರಿಂದ ರಾತ್ರಿ ವೇಳೆ ಎಚ್ಚರ ವಹಿಸಿದ್ದ ಮನೆಯ ಮಾಲೀಕ ವಿಷ್ಣು ಹರಿಕಂತ್ರ ಚಿರತೆ ಬರುತ್ತಿದ್ದಂತೆ ತಮ್ಮ ಬುದ್ಧಿ ಉಪಯೋಗಿಸಿ, ಧೈರ್ಯದಿಂದ ಅದನ್ನು ಸೆರೆಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ:
ಇನ್ನು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ವಿಷ್ಣು ಹರಿಕಂತ್ರ ಮನೆಯ ನಾಯಿ ಬೋನಿನಲ್ಲಿದ್ದ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಿದ್ದರು. ಬೆಳಗ್ಗೆಯಾಗುತ್ತಿದ್ದಂತೆ ಇಡೀ ಊರಿನ ಜನರಿಗೆ ವಿಷಯ ತಿಳಿದು, ಅವರ ಮನೆಯ ಬಳಿ ಆಗಮಿಸಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇನ್ನು ನಾಯಿ ಬೋನು ಗಟ್ಟಿಯಾಗಿ ಇರದ ಹಿನ್ನೆಲೆ, ಕೆಲ ಸಮಯ ಕಾರ್ಯಾಚರಣೆ ನಡೆಸಿ ಸುತ್ತಲೂ ಬಲೆಯನ್ನು ಹಾಕಿ ಚಿರತೆ ತಪ್ಪಿಸಿಕೊಳ್ಳದಂತೆ ಸುರಕ್ಷಿತವಾಗಿ ಹಿಡಿದು ಸ್ಥಳಾಂತರಿಸಿದರು. ಸೆರೆ ಸಿಕ್ಕ ಚಿರತೆಯನ್ನು ಮತ್ತೆ ಅರಣ್ಯಕ್ಕೆ ಬಿಟ್ಟರು.
ನಾಯಿ ಮರಿ ಬಚಾವ್:
ನಾಯಿ ಮರಿಯನ್ನು ಹಿಡಿಯೋದಕ್ಕೆ ಬೋನಿನೊಳಗೆ ಬಂಧಿಯಾದ ಚಿರತೆ ನಾಯಿ ಮರಿಯನ್ನು ಶಿಖಾರಿ ಮಾಡದೇ ಹಾಗೇ ಬಿಟ್ಟಿತ್ತು. ಚಿರತೆಯಿದ್ದ ಬೋನಿನಲ್ಲಿ ನಾಯಿಮರಿಯೂ ಇದ್ದು, ಮರಿಯ ತಾಯಿ ಹೊರಗೆ ನಿಂತು ಕೂಗಾಟ ನಡೆಸುತ್ತಿದ್ದದ್ದು ಸ್ಥಳೀಯರಲ್ಲಿ ಬೇಸರ ಮೂಡಿಸಿತ್ತು.
ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ ಪ್ರೇಮಿ: ಮನನೊಂದು ನೇಣಿಗೆ ಶರಣಾದ ಯುವತಿ...!
ಒಟ್ಟಿನಲ್ಲಿ ಗ್ರಾಮದಲ್ಲಿ ಕೆಲ ದಿನಗಳಿಂದ ಜನರಲ್ಲಿ ಆತಂಕ ಸೃಷ್ಟಿ ಮಾಡಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ವಿಷ್ಣು ಹರಿಕಂತ್ರ ಅವರ ಧೈರ್ಯ ಮಾತ್ರ ನಿಜಕ್ಕೂ ಮೆಚ್ಚುವಂತದ್ದು.