ಕಾರವಾರ: ನಾಯಿ ಮರಿಯನ್ನು ಹೊತ್ತೊಯ್ದರು ತೃಪ್ತಿಯಾಗದ ಚಿರತೆಯೊಂದು ಪುನಃ ಎರಡನೇ ಬಾರಿ ಬಂದು ತಾಯಿ ಹೊತ್ತೊಯ್ದಿರುವ ಘಟನೆ ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದ ಸಂತೆಗದ್ದೆಯಲ್ಲಿ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಂತೆಗದ್ದೆಯ ವೆಂಕಟೇಶ್ ಈಶ್ವರ ನಾಯ್ಕ ಎಂಬುವವರ ಮನೆಯ ಎದುರು ಎರಡು ಮರಿಗಳೊಂದಿಗೆ ನಾಯಿ ಮಲಗಿತ್ತು. ನಿಧಾನವಾಗಿ ಹೆಜ್ಜೆ ಹಾಕುತ್ತ ಬಂದ ಚಿರತೆಯೊಂದು ದಾಳಿ ಮಾಡಿ ನಾಯಿ ಮರಿಯನ್ನು ಕಚ್ಚಿ ಹೊತ್ತೊಯ್ದಿದೆ. ಇಷ್ಟಕ್ಕೆ ಸುಮ್ಮನಾಗದ ಚಿರತೆ ಮತ್ತೆ ಬಂದು ತಾಯಿ ನಾಯಿಯನ್ನು ಹೊತ್ತೊಕೊಂಡು ಹೋಗಿದೆ.
ಮನೆಯವರು ಬೆಳಗ್ಗೆ ಎದ್ದು ನಾಯಿ ಹಾಗೂ ಮರಿಗಳನ್ನು ನೋಡಿದಾಗ ನಾಪತ್ತೆಯಾಗಿದ್ದವು. ಒಂದು ಮರಿ ಮಾತ್ರ ಪತ್ತೆಯಾಗಿತ್ತು. ತಕ್ಷಣ ಮನೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆ ಬಾಗಿಲಿಗೆ ಈ ರೀತಿ ಎರಡೆರಡು ಬಾರಿ ಬಂದು ಚಿರತೆ ಹೊತ್ತೊಯ್ದಿರುವುದನ್ನು ನೋಡಿದ ಸ್ಥಳೀಯರು ಆತಂಕಗೊಂಡಿದ್ದು, ಕೂಡಲೇ ಅರಣ್ಯ ಇಲಾಖೆಯವರು ಈ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ.