ಭಟ್ಕಳ: ಕೊರೊನಾ ವೈರಸ್ ತಡೆಗೆ ದೇಶಾದ್ಯಂತ ಲಾಕ್ ಡೌನ್ ಇದ್ದರೂ ರಸ್ತೆ ಮೇಲೆ ಅನಾವಶ್ಯಕವಾಗಿ ತಿರುಗಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ ತಖಿಯಾ ಸ್ಟ್ರೀಟ್ ನ 39 ವರ್ಷದ ಕೆ. ಎಂ ಶಾಜೀರ್ ಎಂಬಾತನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭಟ್ಕಳದಲ್ಲಿ ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾದ ಹಿನ್ನೆಲೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ತುರ್ತು ಘೋಷಣೆಯಾಗಿತ್ತು. ಇದಾದ ನಂತರ ಯಾರೂ ಮನೆಯಿಂದ ಹೊರಬರದಂತೆ, ಅನವಶ್ಯಕವಾಗಿ ಓಡಾಡದಂತೆ ಸೂಚನೆ ನೀಡಲಾಗಿತ್ತು. ಆದರೆ, ಶಾಜೀರ್ ಅನವಶ್ಯಕವಾಗಿ ಬೈಕ್ ನಲ್ಲಿ ತಿರುಗಾಟ ನಡೆಸುತ್ತಿದ್ದಿದ್ದನ್ನು ಗಮನಿಸಿದ ಪೊಲೀಸರು ಈ ಹಿಂದೆಯೇ ಎರಡು ಬಾರಿ ವಾರ್ನಿಂಗ್ ಸಹ ಮಾಡಿದ್ದರು. ಆದರೂ ಲೆಕ್ಕಿಸದೇ, ಮಾಸ್ಕ್ ಧರಿಸದೇ ತಿರುಗಾಟ ನಡೆಸುತ್ತಿದ್ದ ಶಾಜೀರ್ ಅನ್ನು ಪೊಲೀಸರು ತಡೆದು ಪ್ರಶ್ನಿಸಿದಾಗ ಪೊಲೀಸರಿಗೇ ಬೈದಿದ್ದಾನೆ ಎನ್ನಲಾಗಿದೆ.
ತನಗೆ ವಿನಾಕಾರಣ ಲಾಠಿಯಿಂದ ಹೊಡೆದಿದ್ದಾರೆಂದು ಪೊಲೀಸರ ಮೇಲೆ ಮೇಲಧಿಕಾರಿಗಳಿಗೆ ದೂರು ಕೊಡುತ್ತೇನೆ ಎಂದು ಬೆದರಿಕೆ ಹಾಕಿದ ಹಿನ್ನೆಲೆ ಆರೋಪಿಯ ವಿರುದ್ದ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 52/2020, ಕಲಂ 188, 270, 504, 506 ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.