ಕಾರವಾರ: ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿ ಲಾಕ್ಡೌನ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ 70ಕ್ಕೂ ಹೆಚ್ಚು ಜನರ ಮೇಲೆ ಕಾರವಾರದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಕೆಇಬಿ ಬಳಿ ಇರುವ ಕೋಣೆವಾಡದಲ್ಲಿ ನಿನ್ನೆ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ ಇಬ್ಬರು ಮಕ್ಕಳು ಸೇರಿದಂತೆ ಐವರಲ್ಲಿ ಸೋಂಕು ಪತ್ತೆಯಾಗಿತ್ತು. ಈ ವೇಳೆ ಆರೋಗ್ಯ ಸಿಬ್ಬಂದಿ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಗಂಟೆಗಟ್ಟಲೆ ಆರೋಗ್ಯ ಸಿಬ್ಬಂದಿ ಸೋಂಕಿತರನ್ನು ಕರೆದೊಯ್ಯುವುದಕ್ಕಾಗಿ ಕಾಯಬೇಕಾಯ್ತು. ಕೊನೆಗೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಭಾಯಿಸಿದರು.
ನಿನ್ನೆ ಭಾನುವಾರದ ಲಾಕ್ಡೌನ್ ನಡುವೆಯೂ ರಸ್ತೆಗಿಳಿದ ಜನ ಮಾಸ್ಕ್ ಧರಿಸದೆ, ಗುಂಪಾಗಿ ಸೇರಿ ಪ್ರತಿಭಟನೆ ನಡೆಸುವುದರ ಮೂಲಕ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ಈ ಬಗ್ಗೆ ಕಾರವಾರದ ಕಂದಾಯ ನಿರೀಕ್ಷಕರು ದೂರು ದಾಖಲಿಸಿದ್ದು, ಸುಮಾರು 70ಕ್ಕೂ ಹೆಚ್ಚು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರತಿಭಟನೆ ವೇಳೆ ಸೋಂಕಿತರು ಕೂಡ ಗುಂಪಿನಲ್ಲಿದ್ದ ಕಾರಣ ಸೋಂಕಿತರ ಮನೆ ಸುತ್ತಮುತ್ತಲಿನ ಪ್ರದೇಶವನ್ನೂ ಸೀಲ್ ಡೌನ್ ಮಾಡಲಾಗಿದೆ. ಆದರೂ ಕೂಡ ಜನ ಓಡಾಟ ನಡೆಸಿದ್ದು, ಸೀಲ್ ಡೌನ್ ನೆಪಮಾತ್ರಕ್ಕೆ ಎಂಬಂತಾಗಿದೆ.