ಕಾರವಾರ: ಸಚಿವ ಸಂಪುಟ ವಿಸ್ತರಣೆ, ಮಂತ್ರಿ ಸ್ಥಾನ ನೀಡುವ ವಿಚಾರದಲ್ಲಿ ಸಿಎಂ ನಿಲುವೇ ಅಂತಿಮ, ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ, ಮಂತ್ರಿ ಸ್ಥಾನ ನೀಡುವ ವಿಚಾರದಲ್ಲಿ ಸಿಎಂ ನಿಲುವೇ ಅಂತಿಮ, ಅದಕ್ಕೆ ನಾವು ಬದ್ಧರಾಗಿದ್ದೇವೆ. ಇನ್ನು ಗೋಲಿಬಾರ್ನಲ್ಲಿ ಮೃತಪಟ್ಟ ಇಬ್ಬರಿಗೆ ಮೊದಲು ಹತ್ತು ಲಕ್ಷ ಪರಿಹಾರ ಕೊಡುವುದಾಗಿ ಹೇಳಲಾಗಿತ್ತು. ನಂತರ ಗಲಭೆ ಪ್ರಕರಣದಲ್ಲಿ ಅವರಿದ್ದ ಹಿನ್ನೆಲೆಯಲ್ಲಿ ಪರಿಹಾರ ತಡೆಯಲಾಗಿದೆ. ಈ ಬಗ್ಗೆ ಸಿಎಂ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಮಾಧುಸ್ವಾಮಿ ಹೇಳಿದರು.
ಇನ್ನು ಸಚಿವ ಶ್ರೀರಾಮುಲುಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆನ್ನುವ ಬೇಡಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನನಗೂ ಡಿಸಿಎಂ ಆಗುವ ಆಸೆಯಿದೆ. ಲಿಂಗಾಯತ ಕೋಟಾದಲ್ಲಿ ನನಗೆ ಡಿಸಿಎಂ ಸ್ಥಾನ ಕೊಡಿ ಎನ್ನುತ್ತೇನೆ. ಈಗಾಗಲೇ ಲಕ್ಷ್ಮಣ್ ಸವದಿಗೆ ಡಿಸಿಎಂ ಸ್ಥಾನ ಕೊಟ್ಟಿದ್ದು, ಜನಸಂಖ್ಯೆಗೆ ಅನುಗುಣವಾಗಿ ನಮಗೂ ಕೊಡಿ ಎನ್ನಬಹುದು. ಆದರೆ ಇದಕ್ಕೆ ಸಿಎಂ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಜನವರಿ 14, 15ರ ವೇಳೆಗೆ ಸಚಿವ ಸಂಪುಟ ವಿಸ್ತರಣೆ ಮಾಡುವ ನಿರೀಕ್ಷೆ ಇದೆ ಎಂದರು.