ಕಾರವಾರ: ವೋಟ್ ಬ್ಯಾಂಕ್ ಉಳಿಸುವುದಕೋಸ್ಕರ ಹಿಜಾಬ್ ವಿವಾದ ಹುಟ್ಟು ಹಾಕಿರುವ ಕಾಂಗ್ರೆಸ್ ವಿದ್ಯಾರ್ಥಿಗಳನ್ನು ಬಳಸಿಕೊಂಡು ಮತ್ತಷ್ಟು ಮತೀಯವಾದದ ಬೀಜ ಬಿತ್ತಿ ದೇಶವನ್ನು ತುಂಡರಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಗಂಭೀರ ಆರೋಪ ಮಾಡಿದ್ದಾರೆ.
ಕಾರವಾರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾನುವಾರ ಪಾಲ್ಗೊಂಡಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಇಷ್ಟು ವರ್ಷ ಇಲ್ಲದ ಬುರ್ಕಾ, ಹಿಜಾಬ್, ಕೇಸರಿ ಶಾಲು ವಿವಾದ ಇದೀಗ ಹುಟ್ಟು ಹಾಕಲಾಗಿದೆ. ಸಿದ್ದರಾಮಯ್ಯನವರಂಥ ಹಿರಿಯ ರಾಜಕಾರಣಿ ಜಿನ್ನಾ ಭೂತ ಬಂದಂತೆ ಯಾಕೆ ಆಡುತ್ತಿದ್ದಾರೆ?. ಅವರ ಹಿಂದಿರುವ ಉದ್ದೇಶ ಒಂದೇ, ಮತೀಯ ವೋಟ್ ಬ್ಯಾಂಕ್ ಅನ್ನು ಕ್ರೋಢೀಕರಿಸಲು ತಾಲಿಬಾನ್‌ನ ಅವತಾರದ ಥರ ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಅಲ್ಪಸಂಖ್ಯಾತರು ಕೈಬಿಟ್ಟು ಹೋದಲ್ಲಿ ಕಾಂಗ್ರೆಸ್‌ನವರಿಗೆ ಡೆಪಾಸಿಟ್ ಕೂಡ ಉಳಿಯುತ್ತಿಲ್ಲ. ಯುಪಿಯಲ್ಲಿ ಅವರದ್ದು ನಗಣ್ಯ ಪಾರ್ಟಿ. ಹೀಗಾಗಿ, ಮತೀಯವಾದದ ಅಜೆಂಡಾದಿಂದ ಈ ಹಿಜಾಬ್ ವಿವಾದವನ್ನು ಕಾಂಗ್ರೆಸ್ ಹುಟ್ಟು ಹಾಕಿದೆ. ಇದರ ಹಿಂದೆ ಕಾಂಗ್ರೆಸ್ ಇದೆ. 2014ರಲ್ಲೇ ಕಾಂಗ್ರೆಸ್ ಸರ್ಕಾರವಿದ್ದಾಗ ಸುತ್ತೋಲೆ ಹೊರಡಿಸಿ, ಶಾಲಾ- ಕಾಲೇಜುಗಳಿಗೆ ಸಮವಸ್ತ್ರವೇ ಇರಬೇಕು.
ಸಮವಸ್ತ್ರವನ್ನು ಆಯಾ ಶಾಲಾ- ಕಾಲೇಜು ಆಡಳಿತ ಮಂಡಳಿ ಸೂಚಿಸಿರಬೇಕು ಎಂದು ಹೇಳಿದೆ. ಅದಾಗ್ಯೂ ಈಗ ವಿವಾದ ಹುಟ್ಟು ಹಾಕಲು ಕಾರಣವೇನು? ಮತೀಯವಾದವನ್ನು ಎಬ್ಬಿಸಿ ದೇಶ ಒಡೆದಿದ್ದಾಯ್ತು. ಈಗ ಮತ್ತಷ್ಟು ತುಂಡರಿಸಲು ಸಂಚಿನ ಬೀಜವನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.
ಇನ್ನು ಕಾಂಗ್ರೆಸ್ ಸುಧಾರಣಾ ವಿರೋಧಿ ಎನ್ನುವುದು ಅವರ ನಡವಳಿಕೆ ಮೂಲಕ ವ್ಯಕ್ತವಾಗುತ್ತಿದೆ. ಹಿಂದೂ ಧರ್ಮದಲ್ಲಿ ಸತಿ- ಸಹಗಮನ ಪದ್ಧತಿ, ಬಾಲ್ಯವಿವಾಹ ವಿರೋಧಿಸಲಾಗಿದೆ. ಅಸ್ಪೃಶ್ಯತೆಯನ್ನು ಅಪರಾಧ ಎಂದು ಪರಿಗಣಿಸಲಾಗಿದೆ. ಆದರೆ, ಇಸ್ಲಾಂನಲ್ಲಿ ಮಾತ್ರ ಪರಿವರ್ತನೆಯಾಗುತ್ತಿಲ್ಲ. ಹೆಣ್ಣುಮಕ್ಕಳು ಶೋಷಣೆಯ ಕೇಂದ್ರ ಬಿಂದುವಾಗಿರಿಸಲಾಗಿದೆ. ಬುರ್ಕಾ, ಹಿಜಬ್ ಶೋಷಣೆಯ ಅಭಿವ್ಯಕ್ತತೆಯನ್ನು ತೋರಿಸುತ್ತದೆ. ಬದಲಾವಣೆಗೆ ಒಪ್ಪಿಕೊಳ್ಳಬೇಕು ಎಂದರು.
ಸಿದ್ದರಾಮಯ್ಯ ಅವರ ಮುತ್ಸದ್ಧಿತನ ಮುಸುಕಾಗಿ ಒಂದು ರೀತಿ ತಾಲಿಬಾನಿಯ ಭೂತ ಹೊಕ್ಕ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವರಿಗೆ ಪ್ರಗತಿಗಿಂತ ಹೊಸ ಆಲೋಚನೆಗಳಿಗಿಂತ ಶಾಲೆಯಲ್ಲೂ ಮತೀಯವಾದ ತುರುಕಬೇಕೆಂಬ ಮನಸ್ಥಿತಿಯ ಭೂತ ಹೊಕ್ಕಿದೆ. 1983ರ ಶಿಕ್ಷಣ ಕಾಯ್ದೆ ಆಯಾ ಶಾಲೆಯಲ್ಲಿ ಯಾವ ಸಮವಸ್ತ್ರ ಇರಬೇಕು ಎನ್ನುವುದನ್ನು ಆ ಶಾಲೆ ನಿರ್ಣಯ ಮಾಡಬೇಕು.
ಆ ಸಮವಸ್ತ್ರ ನಿಯಮವನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಈ ಕಾಯ್ದೆ ಹೇಳುತ್ತದೆ. ಸಿದ್ದರಾಮಯ್ಯ ಅವರ ವಕೀಲರ ಬುದ್ಧಿ ಎಲ್ಲಿ ಮುಸುಕಾಗಿದೆ? ನೀವ್ಯಾಕೆ ಮತೀಯವಾದದ ಭೂತ ಹೊಕ್ಕಂತೆ ಹಿಜಬ್ ಪರ ವಕಾಲತ್ತು ಮಾಡುತ್ತಿದ್ದೀರಿ?. ಮತೀಯವಾದದ ಭೂತ ಹೊಕ್ಕಂತೆ ಆಡಿದರೆ ಮತ ಬರುತ್ತದೆಂಬ ದುರಾಸೆಗೆ ತಾಲಿಬಾನ್ ವಾದವನ್ನು ಕಾಲೇಜುಗಳಲ್ಲೂ ತರಲು ಪ್ರಯತ್ನ ಮಾಡುತ್ತಿದ್ದೀರಿ. ಇದರಿಂದ ಸಮಾಜಕ್ಕೆ, ದೇಶಕ್ಕೆ ಯಾವತ್ತೂ ಒಳ್ಳೆಯದಾಗುವುದಿಲ್ಲ ಎಂದರು.
ನಾಳೆ ಪೊಲೀಸರು ಬುರ್ಖಾ ಹಾಕಿ ಬರುತ್ತಾರೆ: ಹಿಜಬ್‌ಗೆ ಕಡ್ಡಾಯವಾಗಿ ಅವಕಾಶ ನೀಡಬೇಕೆಂದು ಭಾರತ್ ಎಜ್ಯುಕೇಶನ್ ಸೊಸೈಟಿ ವರ್ಸಸ್ ಫರೀದಾ ಸೈಯದ್ ಖಾನ್ 2001ರ ಪ್ರಕರಣದಲ್ಲಿ ಆಯಾ ಶಾಲೆಯಲ್ಲಿ ಯಾವ ಸಮವಸ್ತ್ರ ನಿಯಮವಿದೆಯೋ ಅದನ್ನೇ ಪಾಲಿಸಬೇಕೆಂದು ಬಾಂಬೆ ಹೈಕೋರ್ಟ್ ತೀರ್ಪು ನೀಡುತ್ತದೆ.
ನಾಳೆ ಪೊಲೀಸರು ಬುರ್ಖಾ ಹಾಕಿಕೊಂಡು ಬರುತ್ತೇನೆ ಎಂದರೆ ಕಳ್ಳ ಯಾರು, ಪೊಲೀಸ್ ಯಾರು ಗೊತ್ತಾಗುವುದು ಹೇಗೆ? ಪೊಲೀಸರಿಗೊಂದು ಸಮವಸ್ತ್ರ ಇರುತ್ತದೆ. ಹಾಗೆ ಶಾಲೆಯಲ್ಲೂ ಮತೀಯವಾದ, ಪ್ರತ್ಯೇಕತಾವಾದ ಬೆಳೆಸುವುದಾಗಲಿ ಸಮಾಜದ ದೃಷ್ಟಿಯಿಂದ, ಶೈಕ್ಷಣಿಕ ದೃಷ್ಟಿಯಿಂದ ಒಳ್ಳೆಯದಲ್ಲ. ಈ ರೀತಿಯ ಮತೀಯವಾದಕ್ಕೆ ಪ್ರೋತ್ಸಾಹ ನೀಡುವುದನ್ನು ಕಾಂಗ್ರೆಸ್ ಬಿಡಬೇಕು ಎಂದು ಹೇಳಿದರು.
ಓದಿ: 3ನೇ ಪಂಚಮಸಾಲಿ ಪೀಠ ವಿಚಾರ.. ಕೂಡಲಸಂಗಮ ಸ್ವಾಮೀಜಿಗಳ ವಿರುದ್ಧ ಮನಗೂಳಿ ಸ್ವಾಮೀಜಿ ಆಕ್ರೋಶ..