ಕಾರವಾರ: ಪಶ್ಚಿಮ ಘಟ್ಟಗಳ ಸರಣಿಯಲ್ಲಿ ಜೀವವೈವಿಧ್ಯಗಳ ತಾಣ ಅಂತಂದ್ರೆ ಮೊದಲು ನೆನಪಿಗೆ ಬರೋದೇ ಜೋಯಿಡಾ. ಹತ್ತು ಹಲವು ನಿಸರ್ಗದತ್ತ ಪ್ರವಾಸಿ ತಾಣಗಳನ್ನು ಹೊಂದುವ ಮೂಲಕ ಸಾಕಷ್ಟು ಪ್ರವಾಸಿಗರನ್ನು ಜೋಯಿಡಾ ತನ್ನತ್ತ ಕೈಬೀಸಿ ಕರೆಯುತ್ತದೆ. ಇಂತಹ ಪ್ರದೇಶದಲ್ಲಿ ಸಾಲುಮರದ ತಿಮ್ಮಕ್ಕ ವನವನ್ನು ನಿರ್ಮಿಸಿದ್ದ ಅರಣ್ಯ ಇಲಾಖೆ, ಇದೀಗ ಚಿಟ್ಟೆ ಪಾರ್ಕ್ ತೆರೆದು ಜೀವವೈವಿಧ್ಯತೆಯ ಇನ್ನೊಂದು ಲೋಕವನ್ನು ಪರಿಚಯಿಸಲು ಮುಂದಾಗಿದೆ.
ಹೌದು, ಜೋಯಿಡಾ ತಾಲ್ಲೂಕು ಜಿಲ್ಲೆಯಲ್ಲೇ ಅತೀ ಹೆಚ್ಚು ಅರಣ್ಯ ಸಂಪತ್ತನ್ನು ಹೊಂದಿರುವ ಪ್ರದೇಶವಾಗಿದೆ. ಜೊತೆಗೆ ಹುಲಿ ಸಂರಕ್ಷಿತ ಪ್ರದೇಶ ಸೇರಿದ್ದು, ಕಾಳಿ ನದಿತೀರ ಪ್ರವಾಸಿಗರನ್ನು ಸೆಳೆಯುತ್ತದೆ. ಹೀಗಾಗಿ ಈ ಭಾಗದಲ್ಲಿ ಅತಿ ಹೆಚ್ಚು ಚಿಟ್ಟೆ ಪ್ರಭೇದಗಳಿವೆ. ಆದರೆ, ಅವುಗಳ ಜೀವನಕ್ರಮಕ್ಕೆ ಅನುಗುಣವಾಗಿ ಆಹಾರ ಲಭ್ಯತೆಯ ಕೊರತೆಯಿರುವುದನ್ನು ಮನಗಂಡ ಅರಣ್ಯ ಇಲಾಖೆ, ಚಿಟ್ಟೆಗಳ ಪ್ರಮುಖ ಆಹಾರ ಸಸ್ಯಗಳಾದ ತೇರಿನ ಹೂವು, ಪೆಂಟಾಸ್, ಮಿಲ್ಕ್ ಪೀಡ್, ಗೊಂಡೆ ಹೂವು ಸೇರಿದಂತೆ 30ಕ್ಕೂ ಅಧಿಕ ಬಗೆಯ ಹೂವಿನ ಗಿಡಗಳನ್ನು ವನದಲ್ಲಿ ಬೆಳೆಸಿದೆ. ಹೀಗಾಗಿ, ಪ್ರಮುಖ ಚಿಟ್ಟೆ ಪ್ರಭೇದಗಳಾದ ಎಂಗಲ್ಡ್ ಪಿರೋಟ್, ಗ್ರೇ ಕೌಂಟ್, ಪಿಕೋಕ್ ಫೆನ್ಸಿ, ಗ್ರೇ ಫೆನ್ಸಿ, ಟೈಗರ್ ನಂತಹ ಅನೇಕ ಜಾತಿಯ ಚಿಟ್ಟಿಗಳು ಇಲ್ಲಿ ನೆಲೆ ಕಂಡುಕೊಂಡಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
ತಿಮ್ಮಕ್ಕ ವನದಲ್ಲಿ ಚಿಟ್ಟೆಗಳ ಪಾರ್ಕ್‌ನ್ನು ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಪಡಿಸಿಕೊಂಡು ಬರಲಾಗುತ್ತಿದೆ. ಮೊದಲು ಮೂರ್ನಾಲ್ಕು ಪ್ರಭೇದದ ಚಿಟ್ಟೆಗಳು ಮಾತ್ರ ಕಾಣಸಿಗುತ್ತಿದ್ದ ವನದಲ್ಲಿ, ಸದ್ಯ 102 ಬಗೆಯ ಚಿಟ್ಟೆಗಳನ್ನು ಗುರುತಿಸಲಾಗಿದೆ. ಇವುಗಳ ಜೀವನಕ್ರಮ ಆಧರಿಸಿ ಸಂತಾನೋತ್ಪತ್ಪಿ, ಮರಿಗಳ ಬೆಳವಣಿಗೆಗೆ ಸಹಕಾರ ಆಗುವಂತೆ ಗಿಡಗಳನ್ನು ಬೆಳೆಸಲಾಗಿದೆ. ಹೀಗಾಗಿ, ಸಾಕಷ್ಟು ಮಂದಿ ಪ್ರವಾಸಿಗರು ಇಲ್ಲಿನ ಚಿಟ್ಟೆ ಉದ್ಯಾನವನಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಮೊದಲು ಶಾಲೆಗಳು ಪ್ರಾರಂಭವಿದ್ದ ಸಂದರ್ಭ ಶಾಲಾ ಪ್ರವಾಸವನ್ನು ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಚಿಟ್ಟೆಗಳ ಕುರಿತು ಮಾಹಿತಿ ನೀಡಲಾಗುತ್ತಿತ್ತು. ಚಿಟ್ಟೆಗಳ ಅಧ್ಯಯನ ಮಾಡ ಬಯಸುವವರಿಗೂ ಈ ಚಿಟ್ಟೆ ಪಾರ್ಕ್ ಹೇಳಿ ಮಾಡಿಸಿದ ಪ್ರದೇಶವಾಗಿದ್ದು, ಛಾಯಾಗ್ರಾಹಕರು ಹಾಗೂ ಚಿಟ್ಟೆ ಪ್ರಿಯರ ನೆಚ್ಚಿನ ತಾಣವಾಗಿ ಪರಿವರ್ತಿತಗೊಂಡಿದೆ ಎನ್ನುತ್ತಾರೆ ಅರಣ್ಯ ಸಿಬ್ಬಂದಿ.
ಒಟ್ಟಾರೆ, ಜೀವವೈವಿಧ್ಯಗಳ ತಾಣವಾಗಿರುವ ಜೋಯಿಡಾದಲ್ಲಿ ರಾಜ್ಯದ ಮೊದಲ ಚಿಟ್ಟೆ ಪಾರ್ಕ್ ಸ್ಥಾಪನೆಯಾಗುವ ಮೂಲಕ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದು, ನೀವೂ ಕೂಡ ಬಣ್ಣ ಬಣ್ಣದ ಪಾತರಗಿತ್ತಿಗಳ ಲೋಕವನ್ನು ನೋಡಬೇಕು ಅಂತಂದ್ರೆ ಜೋಯಿಡಾಕ್ಕೊಮ್ಮೆ ಭೇಟಿ ನೀಡಿ.