ಕಾರವಾರ: ಹೊನ್ನಾವರ ತಾಲೂಕಿನ ಹೊಸಗದ್ದೆ ಬಳಿ ಸಾರಿಗೆ ಇಲಾಖೆಯ ಬಸ್ಸೊಂದು ಬ್ರೇಕ್ ಫೈಲ್ ಆಗಿ ಮರಕ್ಕೆ ಗುದ್ದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬಹುದಾದ ಬಹುದೊಡ್ಡ ಅನಾಹುತವೊಂದು ತಪ್ಪಿದೆ.
ಹೊನ್ನಾವರದಿಂದ ಜನಕಡ್ಕಲಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಒಟ್ಟು 32 ಜನ ಪ್ರಯಾಣಿಕರಿದ್ದರು. ಆದರೆ ಬಸ್ ಹೊಸಗದ್ದೆ ಸಮೀಪಿಸುತ್ತಿದ್ದಂತೆ ಘಟ್ಟ ಪ್ರದೇಶದಲ್ಲಿ ಬ್ರೇಕ್ ಫೆಲ್ಯೂರ್ ಆಗಿ ನಿಯಂತ್ರಣ ತಪ್ಪಿತ್ತು. ಆದರೆ ಈ ವೇಳೆ ಚಾಲಕ ತೋರಿದ ಸಮಯಪ್ರಜ್ಞೆಯಿಂದಾಗಿ ಆಳ ಕಂದಕಕ್ಕೆ ಬೀಳಬೇಕಿದ್ದ ಬಸ್ ಮರಕ್ಕೆ ಗುದ್ದಿದೆ.
ಘಟನೆಯಲ್ಲಿ ಬಸ್ನ ಕಿಟಕಿಯ ಗಾಜುಗಳು ಸೇರಿ ಸಣ್ಣಪುಟ್ಟ ಹಾನಿಯಾಗಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಬಳಿಕ ಸ್ಥಳೀಯರ ಸಹಕಾರದಿಂದ ಬಸ್ನ್ನು ರಸ್ತೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಬಹುತೇಕ ಭಾಗಗಳಿಗೆ ಕಳಪೆ ಗುಣಮಟ್ಟದ ಬಸ್ಗಳನ್ನು ಬಿಡುತ್ತಿದ್ದು, ಪ್ರತಿ ದಿನ ಒಂದಲ್ಲೊಂದು ಸಮಸ್ಯೆಯಾಗುತ್ತಿದೆ. ಇಷ್ಟಾದರೂ ಈ ಬಗ್ಗೆ ಗಮನ ಹರಿಸದೇ ಪ್ರಯಾಣಿಕರ ಸುರಕ್ಷತೆ ಬಗ್ಗೆ ಅಸಡ್ಡೆ ತೋರುವ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.