ಕಾರವಾರ(ಉತ್ತರ ಕನ್ನಡ): ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ, ಪ್ರತಿಯೊಂದು ಕೆಲಸಕ್ಕೂ ಲಂಚಕೊಡಬೇಕು ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇತ್ತ, ಜಿಲ್ಲೆಯಲ್ಲಿ ಕರ್ತವ್ಯಕ್ಕೆ ಹಾಜರಾದ ದಿನವೇ ಅಬಕಾರಿ ಇಲಾಖೆ ಅಧಿಕಾರಿ ಭ್ರಷ್ಟಾಚಾರ ಆರೋಪದಡಿ ಸಿಕ್ಕಿಬಿದ್ದಿದ್ದಾರೆ. 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಪ್ರೊಬೇಷನರಿ ಅಬಕಾರಿ ನಿರೀಕ್ಷಕಿಯನ್ನು ವಶಕ್ಕೆ ಪಡೆದಿರುವ ಘಟನೆ ಅಂಕೋಲಾದಲ್ಲಿ ನಡೆದಿದೆ.
ಕುಮಟಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರೊಬೇಷನರಿ ಅಬಕಾರಿ ನಿರೀಕ್ಷಕಿ ವಿಜಯಪುರ ಮೂಲದ ಪ್ರೀತಿ ರಾಥೋಡ್ ಅವರನ್ನು ಅಂಕೋಲಾದ ಅಬಕಾರಿ ಇಲಾಖೆಗೆ ಪ್ರಭಾರ ಅಬಕಾರಿ ನಿರೀಕ್ಷಕಿಯಾಗಿ ಇತ್ತೀಚಿಗೆ ನೇಮಕ ಮಾಡಲಾಗಿತ್ತು. ಕಾರವಾರದ ಕೋಡಿಭಾಗದ ಮುಸ್ತಾಕ್ ಹಸನ್ ಎನ್ನುವವರು ಕಳೆದ ಕೆಲ ದಿನಗಳ ಹಿಂದೆ ಕುಮಟಾಗೆ ತೆರಳುವಾಗ ಬೈಕ್ ನಲ್ಲಿ ಮದ್ಯ ಸಾಗಿಸುತ್ತಿದ್ದರು ಎನ್ನಲಾಗ್ತಿದೆ. ಬಳಿಕ ಬೈಕ್ ನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಮಾಲೀಕರು ಬೇರೆಯವರಾದ ಕಾರಣ ಅವರ ಮೇಲೂ ಪ್ರಕರಣ ದಾಖಲಿಸುವುದಾಗಿ ಹೇಳಿ 50 ಸಾವಿರ ರೂ. ಲಂಚವನ್ನು ಪ್ರೀತಿ ಕೇಳಿದ್ದರಂತೆ. ಆದರೆ ಇಷ್ಟೊಂದು ಹಣ ಕೊಡಲು ನಿರಾಕರಿಸಿದಾಗ ಕೇಸ್ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗ್ತಿದೆ. ಕೊನೆಗೆ ಮೊದಲು 20 ಸಾವಿರ ಕೊಡುವುದಾಗಿ ಮಾತುಕತೆಯಾಗಿರುವ ಬಗ್ಗೆ ಮುಸ್ತಾಕ್ ಆರೋಪಿಸಿದ್ದಾರೆ.
ಬಳಿಕ ಈ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದ ಮುಸ್ತಾಕ್, ಅಬಕಾರಿ ನಿರೀಕ್ಷಕಿ ಅವರು ಕೇಳಿದಂತೆ ಹಣ ನೀಡುವಂತೆ ಎಸಿಬಿ ಅಧಿಕಾರಿಗಳು ಸೂಚಿಸಿದ್ದಾರೆ. ನಿರೀಕ್ಷಕಿ ಅಂಕೋಲಾಗೆ ಆಗಮಿಸಿ ಹಣ ಪಡೆಯುವ ವೇಳೆಗೆ ದಾಳಿ ನಡೆಸಿದ ಎಸಿಬಿ ಡಿವೈಎಸ್ಪಿ ಪ್ರಕಾಶ್ ನೇತೃತ್ವದ ತಂಡ ಲಂಚದ ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಓದಿ : ಉಕ್ರೇನ್ನಲ್ಲಿ ಹಿಂಸಾಚಾರ ನಿಲ್ಲಿಸಲು ಭದ್ರತಾ ಮಂಡಳಿಯಲ್ಲಿ ಭಾರತ ಕರೆ