ಕಾರವಾರ (ಉತ್ತರ ಕನ್ನಡ) : ಜಿಲ್ಲಾ ಕೇಂದ್ರ ಕಾರವಾರದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯೇ ಇಲ್ಲ ಎನ್ನುವುದು ಹಲವು ದಿನಗಳಿಂದ ಪಕ್ಷದ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು. ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಇದೀಗ ನಗರದಲ್ಲಿ ಪಕ್ಷದ ಕಚೇರಿ ತೆರೆಯಲಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಕಚೇರಿ ಜಿಲ್ಲಾ ಕೇಂದ್ರವಾದ ಕಾರವಾರದ ಬದಲು ಶಿರಸಿಯಲ್ಲಿ ಮಾಡಲಾಗಿದೆ. ಇನ್ನು ಬಹುತೇಕ ಪಕ್ಷದ ಚಟುವಟಿಕೆಗಳನ್ನು ಶಿರಸಿಯಲ್ಲಿಯೇ ನಡೆಸಲಾಗುತ್ತಿತ್ತು.
ಈ ಹಿಂದೆ ಕಾರವಾರ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಂತಿದ್ದು ಪಕ್ಷದ ಖಾಯಂ ಕಚೇರಿ ನಗರದಲ್ಲಿತ್ತು. ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಕಚೇರಿಗೆ ಬಂದು ಸಭೆ, ಪಕ್ಷ ಸಂಘಟನೆಯ ಚಟುವಟಿಕೆಯ ಕುರಿತು ಚರ್ಚೆ ಇನ್ನಿತರ ಚಟುವಟಿಕೆಗಳನ್ನು ಮಾಡುತ್ತಿದ್ದರು. ಆದರೆ ಕಳೆದ ಕೆಲ ವರ್ಷಗಳಿಂದ ಪಕ್ಷದ ಕಚೇರಿಯೇ ಕಾರವಾರದಲ್ಲಿ ಇರಲಿಲ್ಲ. ಈ ಬಗ್ಗೆ ಹಲವು ಕಾರ್ಯಕರ್ತರು ಪಕ್ಷದ ನಾಯಕರ ಸಭೆಗಳಲ್ಲಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿ, ಪಕ್ಷ ಸಂಘಟನೆಗೆ ಪಕ್ಷದ ಕಚೇರಿಯೇ ಇಲ್ಲದಿದ್ದರೆ ಹೇಗೆ ಎಂದು ವಿರೋಧ ವ್ಯಕ್ತಪಡಿಸಿದ್ದರು.
ಸದ್ಯ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸತೀಶ್ ಸೈಲ್ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. ಇನ್ನು ಪಕ್ಷದ ಪ್ರಚಾರವನ್ನು ಸಹ ಪ್ರಾರಂಭಿಸಲು ಅಭ್ಯರ್ಥಿ ಮುಂದಾದ ಹಿನ್ನೆಲೆಯಲ್ಲಿ ಅಂಕೋಲಾ ಹಾಗೂ ಕಾರವಾರದಲ್ಲಿ ನೂತನ ಕಚೇರಿ ಪ್ರಾರಂಭ ಮಾಡಲಾಗಿದ್ದು, ನಗರದ ಸರ್ದಾರ್ಜಿ ಪೆಟ್ರೋಲ್ ಬಂಕ್ ಬಳಿ ಕಾಂಗ್ರೆಸ್ ಕಚೇರಿಯನ್ನು ಪ್ರಾರಂಭಿಸಿದ್ದು, ಮಾಜಿ ಶಾಸಕ ಸತೀಶ್ ಸೈಲ್ ಉದ್ಘಾಟಿಸಿದರು.
ಈ ಬಗ್ಗೆ ಮಾತನಾಡಿರುವ ಮಾಜಿ ಶಾಸಕ ಸತೀಶ್ ಸೈಲ್, ನಗರದಲ್ಲಿ ಕಾಂಗ್ರೆಸ್ ಕಚೇರಿ ತೆರೆಯಲಾಗಿದೆ. ಈ ಬಾರಿ ಕಾಂಗ್ರೆಸ್ ನೂರಕ್ಕೆ ನೂರರಷ್ಟು ಗೆಲುವು ಸಾಧಿಸುತ್ತೇವೆ. ಎಲ್ಲ ಮುಖಂಡರೂ ಕೂಡ ಈಗಾಗಲೇ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಎಐಸಿಸಿ ಉಸ್ತುವಾರಿಗಳು ಕೂಡ ಗುರುತಿಸಿದ್ದಾರೆ. ಜನರ ಕಾಳಜಿ ವಹಿಸಿರುವುದು ಕಾಂಗ್ರೆಸ್ ಪಕ್ಷ ಮಾತ್ರ ಎಂಬುದು ಈಗಾಗಲೇ ತಿಳಿದಿದೆ. ಯಾರೆ ಪಕ್ಷ ಬಿಟ್ಟು ಇನ್ನೊಂದು ಪಕ್ಷಕ್ಕೆ ಸೇರ್ಪಡೆಯಾದರೂ ಅಹ ಅಲ್ಲಿಂದಲೂ ಐದು ಮಂದಿ ನಮ್ಮೆಡೆಗೆ ಬರುತ್ತಾರೆ. ಚುನಾವಣೆಯಲ್ಲಿ ಜನರೇ ಮುಂದೆ ನಿಂತು ನನ್ನನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಚೇರಿ ಉದ್ಘಾಟನೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ್ ಗುನಗಿ, ಕಾಂಗ್ರೆಸ್ ಜಿಲ್ಲಾ ಕಚೇರಿಯನ್ನು ಶಿರಸಿಯಲ್ಲಿ ಮಾಡಿದ ನಂತರ ಕಾರವಾರದಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿ ಮಾತ್ರ ಇಡಲಾಗಿತ್ತು. ಆದರೆ ಕಳೆದ ಐದು ವರ್ಷದಿಂದ ಬ್ಲಾಕ್ ಕಾಂಗ್ರೆಸ್ ಕಚೇರಿಯೂ ಇಲ್ಲದೇ ಕಾರ್ಯಕರ್ತರು ಅತಂತ್ರರಾಗಿದ್ದರು. ಇನ್ನೊಂದೆಡೆ ಮಾಜಿ ಶಾಸಕ ಸತೀಶ್ ಸೈಲ್ ಕಾಂಗ್ರೆಸ್ನಿಂದ ಕಣಕ್ಕೆ ಇಳಿಯುವುದಿಲ್ಲ, ಪಕ್ಷೇತರವಾಗಿ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಕಾರಣಕ್ಕೆ ಕಚೇರಿ ಪ್ರಾರಂಭ ಮಾಡಿಲ್ಲ ಎನ್ನಲಾಗುತ್ತಿತ್ತು. ಆದರೆ ಕೊನೆಗೂ ಸತೀಶ್ ಸೈಲ್ ಕಾಂಗ್ರೆಸ್ನಿಂದಲೇ ಕಣಕ್ಕೆ ಇಳಿಯಲು ಮುಂದಾಗಿದ್ದಾರೆ. ಚುನಾವಣೆ ಬಳಿಕ ಕಾಂಗ್ರೆಸ್ ಕಚೇರಿ ಮಾಡಿರುವುದು ಹಾಸ್ಯಸ್ಪದ. ಈ ಎಲ್ಲ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನ ಬರುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಟಿಕೆಟ್: ಆರ್.ವಿ.ದೇಶಪಾಂಡೆ ವಿರುದ್ಧ ಪ್ರಣವಾನಂದ ಸ್ವಾಮೀಜಿ ಅಸಮಾಧಾನ