ಕಾರವಾರ: ಉತ್ತರಕನ್ನಡ ಜಿಲ್ಲೆಗೆ ಮಹಾರಾಷ್ಟ್ರದಿಂದ ಆಗಮಿಸಿದ 7 ಮಂದಿ ಸೇರಿದಂತೆ ಒಟ್ಟು 8 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಅರ್ಧ ಶತಕ ದಾಟಿದಂತಾಗಿದೆ.
ಜಿಲ್ಲೆಗೆ ಇತ್ತೀಚೆಗಷ್ಟೇ ಸೇವಾಸಿಂಧು ಅಡಿಯಲ್ಲಿ ಮಹಾರಾಷ್ಟ್ರದ ಮುಂಬೈನಿಂದ ಸಾಕಷ್ಟು ಮಂದಿ ಆಗಮಿಸಿದ್ದರು. ಮಹಾರಾಷ್ಟ್ರದಿಂದ ಹೊನ್ನಾವರಕ್ಕೆ ಆಗಮಿಸಿದ ಒಂದೇ ಕುಟುಂಬದ ನಾಲ್ವರು, ಮುಂಡಗೋಡಿನ ಇಬ್ಬರು, ಮುರುಡೇಶ್ವರದ ಒಬ್ಬ ಹಾಗೂ ಭಟ್ಕಳದ ಸೋಂಕಿತ 659 ರ ಸಂಪರ್ಕದಿಂದ 2 ವರ್ಷದ ಮಗುವಿಗೆ ಸೋಂಕು ಇರುವುದು ದೃಢಪಟ್ಟಿದೆ.
ಈಗಾಗಲೇ ಮಹಾರಾಷ್ಟ್ರದಿಂದ ಹಿಂತಿರುಗಿದವರನ್ನು ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿದ್ದು, ಹೆಚ್ಚಿನ ಆತಂಕ ಇಲ್ಲದಂತಾಗಿದೆ. ಆದರೆ ಇಷ್ಟು ದಿನ ಜಿಲ್ಲೆಯ ಭಟ್ಕಳ ತಾಲೂಕೊಂದರಲ್ಲೇ ಕಾಣಿಸಿಕೊಂಡಿದ್ದ ಕೊರೊನಾ ಸೋಂಕು, ಇದೀಗ ಜಿಲ್ಲೆಯ ಘಟ್ಟದ ಮೇಲಿನ ತಾಲೂಕಿನಲ್ಲೂ ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಇನ್ನು, ಕಳೆದ ಐದು ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಿತ್ತಾದರೂ ನಿನ್ನೆಯಷ್ಟೇ ಭಟ್ಕಳದ ಒಬ್ಬನಲ್ಲಿ ಪಾಸಿಟಿವ್ ಬಂದಿತ್ತು. ಇದೀಗ ಏಕಾಏಕಿ 8 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಸೋಂಕಿತರ ಸಂಖ್ಯೆ 51ಕ್ಕೆ ಏರಿಕೆಯಾದ್ದರಿಂದ ಜಿಲ್ಲೆಯ ಜನತೆಗೆ ಬಿಗ್ ಶಾಕ್ ನೀಡಿದಂತಾಗಿದೆ.