ಶಿರಸಿ: ಇದೇ ನವೆಂಬರ್ 14 ರಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ 11:30 ಕ್ಕೆ ನಾಮಪತ್ರ ಸಲ್ಲಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ತಿಳಿಸಿದ್ದಾರೆ.
ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀತಿ ಸಂಹಿತೆ ಜಾರಿಯಾಗುವ ಹಿಂದಿನ ದಿನ ಅಭಿವೃದ್ಧಿ ಹಣ ತಂದಿದ್ದೇನೆ ಎಂದು ಕ್ಷೇತ್ರದ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಅನರ್ಹ ಶಾಸಕರು ಮಾಡುತ್ತಿದ್ದಾರೆ. ಅದರ ಬದಲಿಗೆ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಎಷ್ಟು ಹಣ ತಂದಿದ್ದರು ಎಂಬುದನ್ನು ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಲ್ಲಾಪುರ ವಿಧಾನಸಭಾ ಕ್ಷೇತ್ರ ನನಗೆ ಹೊಸತಲ್ಲ. 10 ವರ್ಷಗಳಿಂದ ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ಹೆಬ್ಬಾರ್ ಶಾಸಕರಾಗಿದ್ದ ಸಂದರ್ಭದಲ್ಲಿ ಪಕ್ಷ ಸಂಘಟನೆಗೆ ಸ್ವಲ್ಪ ಕುಂಠಿತವಾಗಿತ್ತು. ಈಗ ಮೂರು ಬ್ಲಾಕ್ ಗಳಿಗೆ ಹೊಸ ಅಧ್ಯಕ್ಷರ ನೇಮಕ ಮಾಡಿ ಅತ್ಯುತ್ತಮ ಸಂಘಟನೆ ಮಾಡಲಾಗುತ್ತಿದೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.
ಈ ಹಿಂದೆ ಹೆಬ್ಬಾರ್ ಮೊದಲ ಬಾರಿಗೆ ಶಾಸಕರಾಗಿದ್ದಾಗ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಎರಡನೇ ಬಾರಿಗೆ ಅದು 1400ಕ್ಕೆ ಕುಸಿತವಾಯಿತು. ಇದಕ್ಕೆ ಅವರ ವರ್ತನೆ, ಕಾರ್ಯಕರ್ತರಲ್ಲಿನ ಅವಿಶ್ವಾಸ ಕಾರಣವಾಗಿದೆ. ಅಂದು ಬಿಜೆಪಿ, ಜೆಡಿಎಸ್ ಸೇರಿದ್ದ ನಾಯಕರು, ಕಾರ್ಯಕರ್ತರು ಇಂದು ಸಾಕಷ್ಟು ಸಂಖ್ಯೆಯಲ್ಲಿ ಪುನಃ ಕಾಂಗ್ರೆಸ್ ಗೆ ಮರಳುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಮತ್ತಷ್ಟು ಬಲಿಷ್ಟವಾಗಿದೆ ಎಂದರು.