ಕಾರವಾರ: ಗಿಡಗಂಟಿಗಳು ತುಂಬಿಕೊಂಡು ಪಾಳುಬಿದ್ದ ಕಾರವಾರ ತಾಲೂಕಿನ ಹಣಕೋಣ ಸಮೀಪದ ಭೀಮಕೋಲ್ ಕೆರೆ ಈಗ ಪ್ರವಾಸಿ ತಾಣವಾಗಿ ರೂಪುಗೊಂಡಿದೆ. ಜಿಲ್ಲಾ ಪಂಚಾಯತಿಯ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಈಗಾಗಲೇ ಅಭಿವೃದ್ಧಿಪಡಿಸಲಾಗಿದ್ದ ಕೆರೆ ಬಳಿಯೇ ಇದೀಗ ಸಾಮಾಜಿಕ ಅರಣ್ಯ ವಿಭಾಗದಿಂದ ಪಂಚವಟಿ ವನ ನಿರ್ಮಾಣಗೊಳ್ಳುತ್ತಿದ್ದು, ಇನ್ನೊಂದು ತಿಂಗಳಲ್ಲಿ ಪ್ರವಾಸಿಗರಿಗೆ ತೆರೆದುಕೊಳ್ಳಲಿದೆ.
ಈ ಹಿಂದಿನ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಎಂ.ಪ್ರಿಯಾಂಕಾ ಅವರ ಮುತುವರ್ಜಿಯಿಂದಾಗಿ ಭೀಮಕೋಲ್ ಕೆರೆ ಸುತ್ತಲೂ ಒಂದು ಬದಿಗೆ ವಾಕಿಂಗ್ ಪಾತ್, ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದ್ದು ರಜಾ ದಿನಗಳಲ್ಲಿ ಪ್ರವಾಸಿಗರ ಹಾಟ್ ಸ್ಪಾಟ್ ಆಗಿ ಪರಿವರ್ತನೆಗೊಂಡಿತ್ತು.
ಇದೀಗ ಕಾರವಾರದ ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಒ ಮಂಜುನಾಥ ನಾವಿ ಅವರಿಂದಾಗಿ ಇಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಭರದಿಂದ ಸಾಗುತ್ತಿದ್ದು ರಾಮಾಯಣದಲ್ಲಿ ಬರುವ ಪಂಚವಟಿ ವನದಂತೆ ಇಲ್ಲಿಯೂ ಅದೇ ಹೆಸರಿನಲ್ಲಿ ಗಿಡಗಳನ್ನು ನೆಟ್ಟು ವನ ನಿರ್ಮಿಸಲಾಗುತ್ತಿದೆ. ಇದರೊಂದಿಗೆ ರಾಶಿ ವನ, ನವಗ್ರಹ ವನ, ಚಿಟ್ಟೆ ಉದ್ಯಾನವನ್ನು ಕೂಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹಚ್ಚ ಹಸಿರಿನ ನಡುವೆ ಭೀಮಕೋಲ್ ಕೆರೆ ಇರುವುದರಿಂದ ನಿಸರ್ಗಪ್ರಿಯರನ್ನು ಆರ್ಕಷಿಸುತ್ತಿದೆ. ಕೆರೆಯ ಸುತ್ತಲೂ ಹಸಿರು ತಪ್ಪಲು, ಪ್ರಶಾಂತ ವಾತಾವರಣ ಪ್ರವಾಸಿಗರ ಮನಸೂರೆಗೊಳಿಸಿದ್ದು ತಾಣದ ಅಭಿವೃದ್ಧಿಯಿಂದ ಪ್ರವಾಸಿಗರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಇಲ್ಲಿ ಬೋಟಿಂಗ್ ವ್ಯವಸ್ಥೆ ಕೂಡ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ: ಗಂಗಾವಳಿ ಕಿಂಡಿ ಅಣೆಕಟ್ಟು.. ಊರು ಮುಳುಗಡೆಯಾಗುವ ಆತಂಕದಲ್ಲಿ ಜನ