ಭಟ್ಕಳ: ಪ್ರವಾಸೋದ್ಯಮ ಇಲಾಖೆ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತ ಸಹಯೋಗದೊಂದಿಗೆ ಸ್ಕೂಬಾ ಡೈವಿಂಗ್ ಉತ್ಸವ -2020ನ್ನು ಶಾಸಕ ಸುನೀಲ್ ನಾಯ್ಕ ಇಲ್ಲಿನ ಆರ್.ಎನ್.ಎಸ್. ರೆಸಿಡೆನ್ಸ್ ಸಭಾಂಗಣದಲ್ಲಿಂದು ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ, ಸ್ಥಳೀಯವಾಗಿ ಸ್ಕೂಬಾಡೈವಿಂಗ್ ಬಗ್ಗೆ ಹೆಚ್ಚಿನ ಪ್ರಚಾರ ಅವಶ್ಯಕ. ಕೆಲವು ಅಪಪ್ರಚಾರದಿಂದ ಸ್ಕೂಬಾ ಡೈವಿಂಗ್ಗೆ ಬರಲು ಜನರು ಹೆದರಿದ್ದರು. ಜಿಲ್ಲಾಡಳಿತದ ಪ್ರಯತ್ನಕ್ಕೆ ಪತ್ರಿಕೆಗಳು ಸಾಥ್ ನೀಡಬೇಕು. ಶ್ರೀಲಂಕಾದ ಸ್ನೇಹಿತರೊಂದಿಗೆ ಸ್ಕೂಬಾ ಡೈವಿಂಗ್ ತೆರಳಿದ ವೇಳೆ ಅಲ್ಲಿನ ಡೈವಿಂಗ್ ಕಚೇರಿಯಲ್ಲಿ ಮುರುಡೇಶ್ವರ ಸ್ಕೂಬಾ ಡೈವಿಂಗ್ ಹೆಸರು ಇರುವುದು ಗಮನಕ್ಕೆ ಬಂದಿದೆ. ಜಿಲ್ಲಾಡಳಿತದ ಆಸಕ್ತಿ ಸಂತಸ ತಂದಿದ್ದು, ಮುಂದಿನ ದಿನದಲ್ಲಿ ಸ್ಕೂಬಾ ಡೈವಿಂಗ್ ಪ್ರಚಾರದ ಬಗ್ಗೆ ನಮ್ಮಿಂದ ಅಥವಾ ಜಿಲ್ಲಾಡಳಿತದಿಂದ ಹೆಚ್ಚಿನ ಕಾರ್ಯ ನಡೆಸಲಿದ್ದೇವೆ. ಪ್ರತಿಕೆಗಳಲ್ಲಿಯೂ ನೇತ್ರಾಣಿ ಸ್ಕೂಬಾ ಡ್ರೈವಿಂಗ್ ಪೂರಕವಾಗಿ ಹೆಚ್ಚಿನ ವರದಿ ಪ್ರಚಾರ ಮಾಡಬೇಕೆಂದು ಮನನಿ ಮಾಡಿದರು.
ಜಿಲ್ಲಾಧಿಕಾರಿ ಡಾ.ಕೆ. ಹರೀಶ ಕುಮಾರ ಮಾತನಾಡಿ, ಸ್ಥಳೀಯರಿಗೂ ಇದರ ಅವಕಾಶ ಸಿಗಬೇಕು. ಈಗಾಗಲೇ ಹೆಚ್ಚಿನ ಜನರು ಆಸಕ್ತಿಯಿಂದ ಬರುತ್ತಿದ್ದಾರೆ. ಕಳೆದ ನೆರೆ ಹಾವಳಿಯಿಂದ ಯಾವುದೇ ಉತ್ಸವ ನಡೆಸಿಲ್ಲವಾಗಿದೆ. ಆದರೆ, ಕಳೆದ ಕೆಲ ದಿನದ ಹಿಂದೆ ಕರಾವಳಿ ಉತ್ಸವ, ಗಾಳಿಪಟ ಉತ್ಸವ ಯಶಸ್ವಿಯಾಗಿ ನಡೆಸಿದ್ದೇವೆ. ಸರ್ಕಾರದ ಜೊತೆಗೆ ಖಾಸಗಿ ಅವರ ಪಾತ್ರವೂ ಪ್ರಮುಖವಾದದ್ದು. ಎರಡು ದಿನದ ಈ ಉತ್ಸವದಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಪತ್ರಕರ್ತರ ಸಹಕಾರವೂ ಅವಶ್ಯವಿದೆ. ಸ್ಕೂಬಾಡೈವಿಂಗ್ ಅಲ್ಲಿ ನೀಡುವ ಪೂರಕ ರಕ್ಷಣೆಯನ್ನು ಬಳಸಬೇಕು ಹಾಗೂ ಸಮುದ್ರದೊಳಗಿನ ಉತ್ತಮ ಲೋಕವನ್ನು ನೋಡಿ ಆನಂದಿಸಿ ಎಂದರು.