ಭಟ್ಕಳ: ಸರಕಾರಿ ನೋಂದಣಿ ಕೆಲಸಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ತಾಲೂಕಿನ ಬೆಳಕೆಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಬೆಳಕೆ ಪಂಚಾಯಿತಿಯ ಅಣ್ಣ ನಾಯ್ಕ ಎಸಿಬಿ ದಾಳಿಗೆ ಒಳಗಾದ ಸಿಬ್ಬಂದಿ. ಈತ ಕಳೆದ 15 ದಿನಗಳ ಹಿಂದೆ ಇ -ಸ್ವತ್ತು ನೋಂದಣಿಗಾಗಿ ಆಗಮಿಸಿದ ಬೆಳಕೆ ಅಬ್ಬಿತ್ಲು ನಿವಾಸಿ ದೇವಿದಾಸ ನಾಯ್ಕ ಅವರ ಬಳಿ 5 ಸಾವಿರ ಲಂಚದ ಬೇಡಿಕೆ ಇಟ್ಟಿದ್ದಾನೆ. ಅಲ್ಲದೇ ದೂರವಾಣಿ ಕರೆಯನ್ನು ರೆಕಾರ್ಡ್ ಮಾಡಿಕೊಂಡ ದೇವಿದಾಸ ನಾಯ್ಕ ಕಾರವಾರದ ಎಸಿಬಿ ಕಚೇರಿಗೆ ದೂರು ಸಲ್ಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂದಿಸಿ ಗುರುವಾರ ಇ-ಸ್ವತ್ತು ನೋಂದಣಿಯ 11,100 ರೂ.ಗಳು ಹಾಗೂ ಲಂಚದ ಬೇಡಿಕೆ ಇಟ್ಟ 5000 ರೂ. ಸೇರಿ ಒಟ್ಟು 16,100 ರೂ.ಗಳನ್ನು ನೀಡುವಾಗ ಬೆಳಕೆ ಪಂಚಾಯಿತಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಅಣ್ಣ ನಾಯ್ಕನನ್ನು ವಶಕ್ಕೆ ಪಡೆದಿದ್ದಾರೆ.
ಎಸಿಬಿ ಡಿವೈಎಸ್ಪಿ ನೇತೃತ್ವದ ತಂಡ ದಾಳಿ ನಡೆಸಿ ದಾಖಲೆಗಳನ್ನು ಪರೀಶಿಲನೆ ನಡೆಸಿ ಹೆಚ್ಚಿನ ವಿಚಾರಣೆಗಾಗಿ ಕಾರವಾರ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.