ಭಟ್ಕಳ: ಸದ್ಯ ಭಟ್ಕಳದಲ್ಲಿ ಕೋವಿಡ್ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯ ಜೊತೆಗೆ ಸಾವಿನ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದ್ದು, ಇದರಿಂದ ಸಾಮಾನ್ಯ ಜನರ ಜೊತೆಗೆ ಮೃತ ಕುಟುಂಬಸ್ಥರು ಸಹ ವ್ಯಕ್ತಿಯ ಅಂತ್ಯಕ್ರಿಯೆಗೆ ಮುಂದೆ ಬಾರದ ಸ್ಥಿತಿ ನಿರ್ಮಾಣಗೊಂಡಿದೆ. ಇಂತಹ ಪರಿಸ್ಥಿತಿಯನ್ನು ಅರಿತು ಜನರಲ್ಲಿ ಕೋವಿಡ್ ಭಯ ಹೋಗಲಾಡಿಸಲು ಸಮಾಜ ಸೇವಕರ ತಂಡದ ಯುವಕರು ಮುಂದಾಗಿದ್ದು, ಎಲ್ಲೆಡೆ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಓದಿ: ಅಚ್ಚರಿ..! ಹೊಸಪೇಟೆಯಲ್ಲಿ ಒಂದೇ ಕಾಲಲ್ಲಿ 9 ಬೆರಳುಳ್ಳ ಮಗು ಜನನ
ಮನುಷ್ಯರಿಗೆ ಮನುಷ್ಯರೇ ಆಗಬೇಕು. ಹುಟ್ಟಿನಿಂದ ಸಾವಿನ ತನಕ ಎಲ್ಲರೂ ಸಹಭಾಗಿಯಾಗಿ ಬದುಕಬೇಕೆಂಬ ಮಾತಿನಂತೆ, ಕೊರೊನಾ ಮನುಷ್ಯರಲ್ಲಿ ಒಂದು ಕಡೆ ಒಗ್ಗಟ್ಟನ್ನು ಮೂಡಿಸುತ್ತಿದ್ದರೆ ಇನ್ನೊಂದು ಕಡೆ ಭಯವನ್ನು ಹುಟ್ಟಿಸಿ ಸತ್ತವರ ಅಂತ್ಯಕ್ರಿಯೆಗೆ ಕುಟುಂಬಸ್ಥರೇ ಬಾರದೇ ದೂರ ಸರಿಯುವ ಸ್ಥಿತಿಯೂ ಈಗ ಕಂಡು ಬರುತ್ತಿದೆ.
ಇಂತಹ ವಾತಾವರಣದಲ್ಲಿ ತಾಲೂಕಿನ ಈ ಯುವಕರ ತಂಡ ಸಮಾಜ ಸೇವೆಯ ಉದ್ದೇಶದಿಂದ, ಕೋವಿಡ್ನಿಂದ ಮೃತಪಟ್ಟವರನ್ನು ಇವರೇ ಅಂತ್ಯಕ್ರಿಯೆ ಮಾಡುವ ಪುಣ್ಯದ ಕೆಲಸ ಮಾಡುತ್ತಾ ಬಂದಿದ್ದಾರೆ.
ಆಸರಕೇರಿ ಮೂಲದ ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ಪಾಂಡುರಂಗ ನಾಯ್ಕ ಆಸರಕೇರಿ, ವಿವೇಕ ನಾಯ್ಕ (ಜಾಲಿ ಶೇಡ್ಕುಳಿ), ಆಸರಕೇರಿ ಈಶ್ವರ ಎನ್. ನಾಯ್ಕ, ಈಶ್ವರ ಕೆ. ನಾಯ್ಕ ಆಸರಕೇರಿ, ಚೌಥನಿ ಅರುಣ ನಾಯ್ಕ, ಶ್ರೀನಿವಾಸ ನಾಯ್ಕ ಹನುಮಾನಗರ ಇವರುಗಳಾಗಿದ್ದು, ಇಲ್ಲಿಯ ತನಕ 6 ಮಂದಿ ಕೋವಿಡ್ನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಸಂಪ್ರದಾಯದಂತೆ ಮಾಡಿದ್ದಾರೆ.
ಬಂದರು ರಸ್ತೆಯ ಹಿಂದು ರುದ್ರಭೂಮಿಯಲ್ಲಿ 02, ಮುಟ್ಟಳ್ಳಿ ರುದ್ರಭುಮಿಯಲ್ಲಿ 02, ದೂರದ ಗ್ರಾಮೀಣ ಪ್ರದೇಶವಾದ ಹಾಡುವಳ್ಳಿ ಪಂಚಾಯತ್ ಅರುಕಿ ಮಜಿರೆಯಲ್ಲಿ 01 ಹಾಗೂ ಶಿರಾಲಿ ಅಳ್ವೇಕೋಡಿಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಿದ್ದಾರೆ. ಇನ್ನು ಈ ತಂಡಕ್ಕೆ ಶವಸಂಸ್ಕಾರದ ವೇಳೆ ಅವಶ್ಯಕವಿರುವ ಕಟ್ಟಿಗೆಯ ಇಡು ಮಾಡಲು ಆಸರಕೇರಿಯ ರಾಜೇಶ ನಾಯ್ಕ ಹಾಗೂ ಮಂಜುನಾಥ ನಾಯ್ಕ ಅವರು ಸಹಕರಿಸಿದ್ದಾರೆ.
ಸರ್ಕಾರದ ಕಟ್ಟುನಿಟ್ಟಿನ ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ಮಾಡುತ್ತಿರುವ ಈ ಯುವಕರ ತಂಡ, ಮಾಸ್ಕ್, ಪಿಪಿಇ ಕಿಟ್ ಧರಿಸಿ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ.