ಭಟ್ಕಳ (ಉತ್ತರ ಕನ್ನಡ): ಕೊರೊನಾ ವೈರಸ್ನಿಂದ 2 ತಿಂಗಳ ಲಾಕ್ಡೌನ್ ಹಿನ್ನೆಲೆ ರಾಜ್ಯ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಬಳಿಕ ಭಟ್ಕಳದಲ್ಲಿ ಪ್ರಯೋಗಿಕವಾಗಿ ಬಸ್ ಸಂಚಾರ ಆರಂಭವಾಗಿತ್ತು. ಆದರೆ ಎರಡು ದಿನವೂ ಪ್ರಯಾಣಿಕರಿಲ್ಲದೆ ಬಸ್ ಖಾಲಿ ಖಾಲಿ ಎನ್ನುವಂತಾಗಿದೆ.
ಭಟ್ಕಳ ಕಂಟೇನ್ಮೆಂಟ್ ವಲಯದಲ್ಲಿದ್ದ ಹಿನ್ನೆಲೆ ಇಲ್ಲಿಂದ ಬಸ್ಗಳು ಬೇರೆ ತಾಲೂಕು, ಜಿಲ್ಲೆಗೆ ಸಂಚಾರ ನಿಷೇಧಿಸಲಾಗಿತ್ತು. ಆದರೆ ಬೇರೆ ಡಿಪೋದಿಂದ ಬಸ್ಗಳು ಭಟ್ಕಳ ಮಾರ್ಗವಾಗಿ ತೆರಳುತ್ತಿದ್ದರೂ ಭಟ್ಕಳದಲ್ಲಿ ನಿಲ್ಲದೆ ಹಾಗೇ ತೆರಳುತ್ತಿವೆ.
ಇಂದಿನಿಂದ ಭಟ್ಕಳದಿಂದ ಬೆಂಗಳೂರಿಗೆ, ಹುಬ್ಬಳ್ಳಿ, ಕೊಲ್ಲಾಪುರಕ್ಕೆ ಬಸ್ ಸಂಚಾರ ಆರಂಭವಾದರೂ ಪ್ರಯಾಣಿಕರಿಲ್ಲದೆ ಬಸ್ಗಳು ಖಾಲಿಯಾಗಿವೆ. ಈ ಹಿನ್ನೆಲೆ ಬಸ್ಗಳನ್ನು ಡಿಪೋಗಳಿಗೆ ವಾಪಸ್ ಕಳುಹಿಸಲಾಗುತ್ತಿದೆ. ಹುಬ್ಬಳ್ಳಿ ಸೇರಿ ವಿವಿಧ ಕಡೆ ತೆರಳಿದ ಬಸ್ಗಳು ನಿಗದಿತ ಊರಿಗೆ ಹೋಗದೆ ಅರ್ಧದಲ್ಲಿಯೇ ವಾಪಸ್ ಬಂದಿದ್ದವು.
ಎಲ್ಲದಕ್ಕೂ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿದ್ದು, ಜನರು ಇನ್ನೂ ಸಹ ಲಾಕ್ಡೌನ್ ಸಡಿಲಿಕೆಯಾಗಿದ್ದರೂ ಕೊರೊನಾ ಭಯದಲ್ಲಿದ್ದಾರೆ. ಮಂಗಳವಾರ ಭಟ್ಕಳದಿಂದ ಶಿರಸಿ, ಹುಬ್ಬಳ್ಳಿ, ಕಾರವಾರ ಶಿವಮೊಗ್ಗ ಬೆಂಗಳೂರಿಗೆ ಬಸ್ ಬಿಡಲಾಗಿದ್ದು, ಒಟ್ಟು 13 ಬಸ್ ತೆರಳಿದ್ದವು. ಬುಧವಾರ 8 ಬಸ್ ಬಿಡಲಾಗಿದ್ದರೂ 3 ಬಸ್ಗಳು ವಾಪಸ್ ಬಂದಿವೆ. ಈ ಪೈಕಿ ಭಟ್ಕಳ, ಹೊನ್ನಾವರ, ಕುಂದಾಪುರಕ್ಕೆ ತೆರಳಿದ ಬಸ್ಗಳು ಸಹ ಇದ್ದವು. ಭಟ್ಕಳ ಪಕ್ಕದ ಉಡುಪಿ ಜಿಲ್ಲೆಯಲ್ಲಿ ಸದ್ಯ ಕೊರೊನಾ ಪ್ರಕರಣ ಭಾರಿ ಏರಿಕೆ ಕಂಡು ಬಂದ ಹಿನ್ನೆಲೆ ಕುಂದಾಪುರಕ್ಕೆ ತೆರಳುವ ಪ್ರಯಾಣಿಕರು ಇಲ್ಲದಂತಾಗಿದೆ.