ಭಟ್ಕಳ : ಮಾರಾಟ ಮಾಡುವ ಉದ್ದೇಶದಿಂದ ದನದ ಮಾಂಸ ಸಾಗಿಸುತ್ತಿದ್ದ ತಂಡದ ಮೇಲೆ ನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. 9 ಸಾವಿರ ಮೌಲ್ಯದ 30 ಕೆಜಿ ಮಾಂಸವನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸೈಪುಲ್ಲಾ ಮೊಹಮ್ಮದ್ ಮೀರಾ ಜುಬಾಪು (39) ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿತರು ಸೇರಿ ಎಲ್ಲಿಂದಲೋ ಒಂದು ಜಾನುವಾರನ್ನು ಕದ್ದು ತಂದು ಬಂದರ ರೋಡ್ 2ನೇ ಕ್ರಾಸ್ ಕೊಕ್ತಿ ನಗರದ ಗುಲೇ ಜಾಹಿನ್ ಮಂಜಿಲ್ ಅನ್ನೋರ ಮನೆಯ ಕಾಂಪೌಂಡ್ ಒಳಗಡೆ ಕಟಾವು ಮಾಡಿದ್ದಾರೆ.
ಕಟಾವು ಮಾಡಿದ 30 ಕೆಜಿ ಮಾಂಸವನ್ನು ಸಾಗಾಟ ಮಾಡಿಕೊಂಡು ಹೋಗುವ ತಯಾರಿಯಲ್ಲಿದ್ದಾಗ ಪೊಲೀಸರು ದಾಳಿ ಮಾಡಿ ದನದ ಮಾಂಸದ ಜೊತೆ ಓರ್ವ ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ನಗರದ ಠಾಣಾ ಪಿಎಸ್ಐ ಭರತ್ ಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ದಾಳಿಯ ಸಂದರ್ಭದಲ್ಲಿ ಇನ್ನೋರ್ವ ಆರೋಪಿ ಅಬ್ದುಲ್ ದಹಿಂ ಎಂಬಾತ ಪರಾರಿಯಾಗಿದ್ದಾನೆ. ಸದ್ಯ ಈ ಕುರಿತು ನಗರ ಠಾಣೆಯಲ್ಲಿ ಪಿಎಸ್ಐ ಭರತ್ ಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.