ಶಿರಸಿ: ಹೊಳೆಯ ಅಂಚಿಗೆ ಮೇಯುತ್ತಿದ್ದ ದನಗಳನ್ನು ಕದ್ದು, ಮಾಂಸದ ತುಂಡುಗಳನ್ನಾಗಿ ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಶಿರಸಿ ತಾಲೂಕಿನ ಚಿಪಗಿ ಚೆಕ್ ಪೋಸ್ಟ್ ಬಳಿ ನಡೆದಿದೆ.
ಜೊತೆಗೆ 2.30 ಕ್ವಿಂಟಾಲ್ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾವೇರಿಯ ಬ್ಯಾಡಗಿಯ ಇಸ್ಲಾಂಪುರದ ತಬ್ರೇಜ್ ಹನೀಫ್ (36) ಹಾಗೂ ಬ್ಯಾಡಗಿಯ ಶಿವಪುರಬಡಾವಣೆಯ ವಾಸುದೇವ ಹರಕೇರಿ (29) ಬಂಧಿತ ಆರೋಪಿಗಳಾಗಿದ್ದಾರೆ. ಇವರು ಹಾನಗಲ್ಲಿನ ಸಂಗೂರು ಹೊಳೆಯ ಹತ್ತಿರ ಮೇಯುತ್ತಿದ್ದ ದನಗಳನ್ನು ಕಳ್ಳತನ ಮಾಡಿ ಅಲ್ಲೇ ಹತ್ತಿರದಲ್ಲಿ ಕಡಿದು 18,450 ರೂ. ಮೌಲ್ಯದ ಸುಮಾರು 2 ಕ್ವಿಂಟಾಲ್ 30 ಕೆಜಿ ಮಾಂಸವನ್ನು ಕಾರಿನಲ್ಲಿ ಸಾಗಿಸುತ್ತಿದ್ದಾಗ ಬಂಧಿಸಲಾಗಿದೆ.
ಹಾನಗಲ್ಲಿನಿಂದ ಭಟ್ಕಳಕ್ಕೆ ಮಾಂಸವನ್ನು ಸಾಗಿಸುತ್ತಿದ್ದು, ಮದುವೆಯೊಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಮಾಂಸ ಸಾಗಾಟಕ್ಕೆ ಬಳಸಿದ್ದ ಸ್ವಿಪ್ಟ್ ಡಿಸೈರ್ (ಕೆಎ-68/0569) ವಶಪಡಿಸಿಕೊಳ್ಳಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.